ಸಮ್ಮಿಶ್ರ ಸರಕಾರದ ಜನಪರ ಯೋಜನೆ ಬಗ್ಗೆ ಬಿಜೆಪಿಗೆ ಅಸೂಯೆ: ಕುಮಾರಸ್ವಾಮಿ
"ಇನ್ನು ಮುಂದೆ ಮಾಧ್ಯಮಗಳ ಎದುರು ಮಾತನಾಡುವುದಿಲ್ಲ"

ಬೆಂಗಳೂರು, ನ.22: ಸಮ್ಮಿಶ್ರ ಸರಕಾರದ ರೈತರ ಸಾಲ ಮನ್ನಾ ಯೋಜನೆ, ಬಡವರ ಪರವಾದಂತಹ ಬಡವರ ಬಂಧು ಯೋಜನೆ ಬಗ್ಗೆ ಬಿಜೆಪಿಗೆ ಅಸೂಯೆಯಾಗಿದೆ. ಹೀಗಾಗಿ ನಾನು ಮಾಡುವ ಪ್ರತಿಯೊಂದು ಕೆಲಸದಲ್ಲೂ ತಪ್ಪು ಹುಡುಕುವುದರಲ್ಲಿ ನಿರತವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ನಗರದಲ್ಲಿ ಬಡವರ ಬಂಧು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಮಾಲೆ ಕಣ್ಣಿನವರಿಗೆ ಎಲ್ಲವು ಹಳದಿ ರೀತಿಯಲ್ಲಿ ಕಾಣುತ್ತದೆ. ಅದೇ ರೀತಿಯಲ್ಲಿ ಬಿಜೆಪಿ ನಾಯಕರು ರಾಜ್ಯ ಸರಕಾರ ಮಾಡುವ ಪ್ರತಿಯೊಂದು ಕೆಲಸ ಹಾಗೂ ನಾನು ಮಾತಾಡುವ ಪ್ರತಿಯೊಂದು ಹೇಳಿಕೆಯಲ್ಲಿ ಹಳದಿ ಕಣ್ಣಿನಿಂದಲೆ ನೋಡುತ್ತಿದ್ದಾರೆ ಎಂದು ವಿಷಾದಿಸಿದರು.
ರೈತರು ಸೇರಿದಂತೆ ರಾಜ್ಯದ ಎಲ್ಲ ಕ್ಷೇತ್ರದ ಬಡವರ ಪರವಾಗಿ ಕೆಲಸ ಮಾಡಲು ರಾಜ್ಯ ಸರಕಾರ ಸಿದ್ಧವಿದೆ. 45ಸಾವಿರ ಕೋಟಿರೂ.ರೈತರ ಸಾಲ ಮನ್ನಾ ಘೋಷಿಸಿದ್ದೇವೆ. ಅದನ್ನು ಯಶಸ್ವಿಯಾಗಿ ಜಾರಿ ಮಾಡುವ ನಿಟ್ಟಿನಲ್ಲಿ ಹಣದ ಕ್ರೋಡೀಕರಣ, ರಾಷ್ಟ್ರೀಯ ಬ್ಯಾಂಕ್‌ಗಳ ಆಡಳಿತ ಮಂಡಳಿಗಳ ಜತೆ ಚರ್ಚೆ ನಡೆಸಲಾಗುತ್ತಿದೆ. ಆದರೂ ಬಿಜೆಪಿ ನಾಯಕರು ವಿನಾಕಾರಣ ಜನತೆಗೆ ತಪ್ಪು ಸಂದೇಶ ನೀಡುವಲ್ಲಿ ನಿರತವಾಗಿದ್ದಾರೆ ಎಂದು ಅವರು ಹೇಳಿದರು.
ರೈತರು ಹಾಗೂ ಕಾರ್ಖಾನೆ ಮಾಲಕರ ಜತೆ ಕಬ್ಬು ಖರೀದಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಕಾರ್ಖಾನೆ ಮಾಲಕರು ಒಪ್ಪಂದದಂತೆ ಹಣ ನೀಡಿಲ್ಲ. ಹೀಗಾಗಿ ಸಮಸ್ಯೆ ಉದ್ಭವಿಸಿದೆ. ರೈತರು ಈ ವಿಷಯವನ್ನು ನನಗೆ ತಿಳಿಸದೆ, ನನ್ನ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗೆ ನನ್ನ ಗಮನಕ್ಕೆ ಬರದ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದು ಸರಿಯೇ ಎಂದು ಅವರು ಪ್ರಶ್ನಿಸಿದರು.
ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರಿಂದ ನಾನು ಕಲಿಯಬೇಕಿಲ್ಲ. ಬಿಜೆಪಿ ಆಡಳಿತದಲ್ಲಿ ಏನೆಲ್ಲ ಆಗಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ನಾನು ಯಾವ ಕಾರಣಕ್ಕೂ ಪಲಾಯನ ಮಾಡಲ್ಲ. ಮುಂದಿನ ಅಧಿವೇಶನದಲ್ಲೂ ಬಿಜೆಪಿಯ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದ್ದೇನೆಂದು ಅವರು ತಿಳಿಸಿದರು.
ಇನ್ನು ಮುಂದೆ ಮಾಧ್ಯಮಗಳ ಎದುರು ಮಾತನಾಡುವುದಿಲ್ಲ
ಮಾಧ್ಯಮಗಳಿಗೆ ನಾನು ಏನು ಮಾತನಾಡಿದರು ತಪ್ಪು. ಯಾವ ಪದ ಬಳಕೆ ಮಾಡಿದರೂ ಅಪಾರ್ಥವಾಗಿ ಬಿಂಬಿಸಲಾಗುತ್ತಿದೆ. ರಾಜ್ಯದಲ್ಲಿ ನಡೆಯುವ ಸಣ್ಣ ಪ್ರತಿಭಟನೆಯನ್ನು ಸರಕಾರದ ವಿರುದ್ಧ ಎತ್ತು ಕಟ್ಟಲಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಮಾಧ್ಯಮಗಳ ಮುಂದೆ ಮಾತನಾಡುವುದಿಲ್ಲ. ಸಾರ್ವಜನಿಕ ವೇದಿಕೆಗಳಲ್ಲಷ್ಟೆ ಮಾತನಾಡುತ್ತೇನೆ.
ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ







