ಮೆಟ್ರೋ ಆರು ಬೋಗಿಗಳ ಮೂರನೇ ರೈಲಿಗೆ ಮುಖ್ಯಮಂತ್ರಿ ಚಾಲನೆ

ಬೆಂಗಳೂರು, ನ.22: ನಮ್ಮ ಮೆಟ್ರೋದ ಮೂರನೇ ಆರು ಬೋಗಿಗಳ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಚಾಲನೆ ನೀಡಿದ್ದಾರೆ.
ಗುರುವಾರ ನಗರದ ವಿಧಾನಸೌಧ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಆರು ಬೋಗಿಗಳ ರೈಲಿಗೆ ಹಸಿರು ನಿಶಾನೆ ತೋರಿಸಿದರು.
ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಕಳೆದ ವರ್ಷದ ಜೂನ್‌ನಲ್ಲಿ ಮೊದಲ ಬಾರಿಗೆ ಆರು ಬೋಗಿಗಳ ರೈಲನ್ನು ಓಡಿಸಲಾಗಿತ್ತು. ಅನಂತರ ಎಲ್ಲ ರೈಲುಗಳಿಗೂ ಆರು ಬೋಗಿಗಳನ್ನು ಅಳವಡಿಸಲು ಕಾರ್ಯ ಯೋಜನೆಯನ್ನು ರೂಪಿಸಲಾಗಿತ್ತು. ಅದರ ಭಾಗವಾಗಿ 2018 ಅಕ್ಟೋಬರ್‌ನಲ್ಲಿ ಎರಡನೇ ಆರು ಬೋಗಿಗಳ ರೈಲಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದ್ದರು. ಇದಾದ ಒಂದು ತಿಂಗಳಲ್ಲಿಯೇ ಮತ್ತೊಂದು ರೈಲಿಗೂ ಚಾಲನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ನಾಲ್ಕನೇ ರೈಲಿಗೆ ಈಗಾಗಲೇ ಆರು ಬೋಗಿಗಳನ್ನು ಅಳವಡಿಸಿದ್ದು, ಪರಿಕ್ಷಾರ್ಥವಾಗಿ ಸಂಚಾರ ನಡೆಸುತ್ತಿದೆ. ಅದನ್ನು ಮುಂದಿನ 10-15 ದಿನಗಳಲ್ಲಿ ಅಧಿಕೃತವಾಗಿ ಚಾಲನೆ ನೀಡಿ, ಉದ್ಘಾಟಿಸಲಾಗುವುದು ಎಂದರು.
ಈಗಾಗಲೇ ಆರು ಬೋಗಿಗಳ ಎಲ್ಲ ರೈಲುಗಳು ಪೂರ್ವ ಮತ್ತು ಪಶ್ಚಿಮದ ನೇರಳೆ ಮಾರ್ಗದಲ್ಲಿ(ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗ) ಸಂಚರಿಸುತ್ತಿವೆ. ಉತ್ತರ-ದಕ್ಷಿಣ ಭಾಗದ ಹಸಿರು ಮಾರ್ಗ(ನಾಗಸಂದ್ರ-ಯಲಚೇನಹಳ್ಳಿ ಮಾರ್ಗ)ದ ಮೆಟ್ರೋ ರೈಲುಗಳಿಗೂ ಆರು ಭೋಗಿಗಳನ್ನು ಅಳವಡಿಸಬೇಕು ಎಂಬ ಬೇಡಿಕೆ ಬಂದಿದೆ. ಹೀಗಾಗಿ, ನಾಲ್ಕನೇ ರೈಲಿಗೆ ಹಸಿರು ಮಾರ್ಗದಲ್ಲಿರುವುದಕ್ಕೆ ಬೋಗಿ ಅಳವಡಿಸಿದ್ದು, ಕಾರ್ಯಾರಂಭ ಮಾಡಿದೆ. ಅದನ್ನು ಡಿಸೆಂಬರ್‌ನಲ್ಲಿ ಸಂಚಾರ ಮುಕ್ತ ಮಾಡಲಾಗುತ್ತದೆ ಎಂದು ತಿಳಿಸಿದರು.
ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿಯ ಕಡೆ ಹೆಚ್ಚು ಐಟಿ-ಬಿಟಿ ಕಂಪನಿಗಳು, ಸೇರಿದಂತೆ ವಾಣಿಜ್ಯ ಚಟುವಟಿಕೆ ಕೇಂದ್ರಗಳು ಅಧಿಕವಾಗಿದೆ. ಈ ಕಡೆಗೆ ಬೆಳಗ್ಗೆ ಹಾಗೂ ಸಂಜೆಯ ಕೆಲಸದ ಅವಧಿಯಲ್ಲಿ ಅಂದಾಜು 19 ಸಾವಿರಕ್ಕೂ ಅಧಿಕ ಜನ ಪ್ರಯಾಣ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಆರು ಬೋಗಿಗಳ ರೈಲು ಅಳವಡಿಸಲು ಹೆಚ್ಚು ಒತ್ತು ನೀಡಲಾಗಿತ್ತು ಎಂದು ಹೇಳಿದರು.
ಆದರೆ, ಹಸಿರು ಮಾರ್ಗಗಳು ಹೆಚ್ಚು ವಸತಿ ಪ್ರದೇಶಗಳನ್ನು ಹೊಂದಿದ್ದು, ವಾಣಿಜ್ಯ ಚಟುವಟಿಕೆಗಳು ಕಡಿಮೆ ಸಂಖ್ಯೆಯಲ್ಲಿವೆ. ಕೆಲಸದ ಸಮಯದಲ್ಲಿ ಈ ಮಾರ್ಗದಲ್ಲಿ ಅಂದಾಜು ಹತ್ತು ಸಾವಿರ ಜನ ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ, ಈ ಮಾರ್ಗದಲ್ಲಿ ಆರು ಬೋಗಿಗಳ ರೈಲಿಗೆ ಹೆಚ್ಚು ಒತ್ತು ನೀಡಲು ಸಾಧ್ಯವಾಗಿಲ್ಲ. ಆದರೆ, ಮುಂದಿನ ರೈಲನ್ನು ಇದೇ ಮಾರ್ಗದಲ್ಲಿ ಸಂಚಾರ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದೀಗ ಸಂಚಾರ ಮಾಡುತ್ತಿರುವ ಮೂರು ಬೋಗಿಗಳ ರೈಲಿನಲ್ಲಿ ಒಂದು ಬಾರಿಗೆ ಸುಮಾರು 750 ಜನ ಆರಾಮವಾಗಿ ಪ್ರಯಾಣಿಸಬಹುದು. ಆದರೆ, ಆರು ಬೋಗಿಗಳ ರೈಲಿನಲ್ಲಿ 1500 ಜನ ಆರಾಮವಾಗಿ ಪ್ರಯಾಣಿಸಬಹುದಿದ್ದು, ಹೊಂದಾಣಿಕೆ ಮಾಡಿಕೊಂಡು ಪ್ರಯಾಣಿಸುವುದಾದರೆ ಗರಿಷ್ಠ ಎರಡು ಸಾವಿರ ಜನ ಪ್ರಯಾಣಕ್ಕೆ ಅವಕಾಶವಿದೆ ಎಂದು ಅಜಯ್ ಸೇಠ್ ವಿವರಿಸಿದರು.
2019 ಕ್ಕೆ ಆರು ಬೋಗಿ ಅಳವಡಿಕೆ ಪೂರ್ಣ: ಬಿಇಎಂಎಲ್ ಪ್ರತಿ ತಿಂಗಳು ಮೂರರಿಂದ ನಾಲ್ಕು ಭೋಗಿಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿದೆ. ಮುಂದಿನ ವರ್ಷದ ಸೆಪ್ಟೆಂಬರ್ ವೇಳೆಗೆ ನಮ್ಮ ಮೆಟ್ರೋದ ಎಲ್ಲ ರೈಲುಗಳಿಗೂ ಆರು ಬೋಗಿಗಳನ್ನು ಅಳವಡಿಕೆ ಮಾಡುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು.







