ಪ್ರಧಾನಿ ಮೋದಿ ದೇಶದ ಜನರ ಕ್ಷಮೆ ಯಾಚಿಸಲಿ: ವಿ.ಪ.ಸದಸ್ಯ ಭೋಜೇಗೌಡ ಆಗ್ರಹ
"ನೋಟು ಅಮಾನ್ಯೀಕರಣದಿಂದ ಸಾರ್ವಜನಿಕರಿಗೆ ತೊಂದರೆ"

ಚಿಕ್ಕಮಗಳೂರು, ನ.22: ನೋಟು ಅಮಾನ್ಯೀಕರಣದಿಂದ ರೈತರು, ಕಾರ್ಮಿಕರು, ಸಣ್ಣ ಉದ್ದಿಮೆದಾರರಿಗೆ ತೊಂದರೆಯಾಗಿದೆ ಎಂದು ವಿರೋಧ ಪಕ್ಷಗಳೂ ಸೇರಿದಂತೆ ಸಂಘಸಂಸ್ಥೆಗಳು ಕೇಂದ್ರ ಸರಕಾರ 500, 1000 ರೂ. ಮುಖ ಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಕ್ರಮವನ್ನು ಖಂಡಿಸಿದ್ದವು. ಆದರೆ ಕೇಂದ್ರ ಸರಕಾರ ಇದನ್ನು ಒಪ್ಪಿಕೊಳ್ಳದೇ ಸಮರ್ಥನೆ ಮಾಡಿಕೊಂಡಿತ್ತು. ಆದರೆ ಪ್ರಸಕ್ತ ಕೇಂದ್ರದ ಸಂಸದೀಯ ಸಮಿತಿಯು ನೋಟು ಅಮಾನ್ಯೀಕರಣದಿಂದ ದೇಶದ ಸಾಮಾನ್ಯ ಜನರಿಗೆ ತೊಂದರೆಯಾಗಿದ್ದು ನಿಜ ಎಂಬುದನ್ನು ಒಪ್ಪಿಕೊಂಡಿದೆ. ಮೋದಿ ಸರಕಾರ ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆಗ್ರಹಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ನೋಟು ಅಮಾನ್ಯೀಕರಣದಿಂದ ಎದುರಾದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾದಾಗ ನೋಟು ಅಮಾನ್ಯೀಕರಣ ಬಡವರು, ರೈತರು, ಕಾರ್ಮಿಕರು, ಸಣ್ಣ ಉದ್ದಿಮೆದಾರರ ಹಿತಕ್ಕಾಗಿ ಕೈಗೊಂಡ ಕ್ರಮ ಎಂದು ಕೇಂದ್ರ ಸರಕಾರ ಹೇಳಿಕೆ ನೀಡಿ ತನ್ನ ತಪ್ಪನ್ನು ಸಮರ್ಥಿಸಿಕೊಂಡಿತ್ತು. ಆದರೆ ಇದೇ ವರ್ಗಗಳು ನೋಟು ನಿಷೇದದಿಂದ ತೊಂದರೆಗೊಳಗಾಗಿದ್ದವು. ಪ್ರಸಕ್ತ ಕೇಂದ್ರದ ಸಂಸದೀಯ ಸಮಿತಿಯೇ ನೋಟು ಅಮಾನ್ಯೀಕರಣದಿಂದ ಸಾಮಾನ್ಯ ಜನರಿಗಾದ ತೊಂದರೆಗಳನ್ನು ಉಲ್ಲೇಖಿಸಿದ್ದು, ಮೋದಿ ಸರಕಾರಕ್ಕೆ ಈಗ ಜ್ಞಾನೋದಯವಾದಂತಾಗಿದೆ. ಕೇಂದ್ರ ಸರಕಾರ ನೋಟುಗಳ ಅಮಾನ್ಯೀಕರಣ ಮಾಡಿದ ಕ್ರಮಕ್ಕೆ ವಿಷಾದ ವ್ಯಕ್ತಪಡಿಸಿ ಸಂಕಷ್ಟಕ್ಕೆ ಒಳಗಾಗ ರೈತರು, ಕೂಲಿ ಕಾರ್ಮಿಕರು, ಸಣ್ಣ ಉದ್ದಿಮೆದಾರರ ಕ್ಷಮೆ ಕೇಳಬೇಕೆಂದು ಬೋಜೇಗೌಡ ಆಗ್ರಹಿಸಿದರು.
ಜಿಲ್ಲೆಯ ನೀರಾವರಿ ಸಮಸ್ಯೆ ಕುರಿತು ಚರ್ಚಿಸುವ ಸಲುವಾಗಿ ನ.28 ರಂದು ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ತರಳುಬಾಳು ಕೇಂದ್ರದಲ್ಲಿ ಸಭೆ ನಡೆಯಲಿದೆ. ಜನಪ್ರತಿನಿಧಿಗಳು, ರೈತ ಮುಖಂಡರು, ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆಂದ ಅವರು, ಸಭೆಯಲ್ಲಿ ಜಿಲ್ಲೆಯ ಕರಗಡ, ಹೆಬ್ಬೆ, ಭದ್ರಾ, ಅಯ್ಯನಕೆರೆ, ಮದಗದ ಕೆರೆ ಒಳಗೊಂಡಂತೆ ಕೆರೆಗಳಿಗೆ ನೀರು ತುಂಬಿಸುವ ನೀರಾವರಿ ಯೋಜನೆಗಳ ಅನುಷ್ಠಾನದ ಕುರಿತು ಚರ್ಚೆ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿರುವ ಸಮಸ್ಯೆಗಳ ಬಗ್ಗೆ ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಲಾಗಿದೆ. ಸಮಸ್ಯೆಗಳನ್ನು ಸರಿಪಡಿಸಲು ಕಾಲಾವಕಾಶ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಮಸ್ಯೆಗಳು ಬಗೆಹರಿಯಲಿವೆ ಎಂದ ಅವರು, ಇನ್ನು ಎರಡರಿಂದ ಮೂರು ತಿಂಗಳಲ್ಲಿ ಜಿಲ್ಲೆಯ ಸರಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಚಾರಕ್ಕೆ ಕಡಿವಾಣ ಬೀಳಲಿದ್ದು, ಈ ಸಂಬಂಧ ಅಗತ್ಯ ಕ್ರಮಕೈಗೊಂಡಿದ್ದೇನೆಂದರು.
ಜಿಲ್ಲೆಯ ಜನತೆಗೆ ಕೈಗೆಟಕುವ ದರದಲ್ಲಿ ಮರಳು ಲಭ್ಯವಾಗುವಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮರಳು ಸುಲಭವಾಗಿ ಜನತೆಗೆ ಸಿಗಬೇಕು, ಆರೋಗ್ಯಕರ ಬೆಲೆಯಲ್ಲಿ ಸಿಗಬೇಕು. ಏಕದರ ಸಾಗಣಿಕೆ ನಿಯಮ ತೆಗೆದು ಅಂತರದ ಆಧಾರದ ಮೇಲೆ ಬಾಡಿಗೆ ನಿಗದಿ ಮಾಡುವಂತೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಮರಳು ಲಭ್ಯವಾಗಲಿದೆ ಎಂದು ಇದೇ ವೇಳೆ ಬೋಜೇಗೌಡ ತಿಳಿಸಿದರು.
ರಾಜ್ಯ ಸರಕಾರ ಮೀಟರ್ ಬಡ್ಡಿ ದಂಧೆಕೋರರಿಗೆ ಕಡಿವಾಣ ಹಾಕಿ ಬೀದಿಬದಿ ವ್ಯಾಪಾರಗಳನ್ನು ಶೋಷಣೆಯಿಂದ ತಪ್ಪಿಸಲು ಬಡ್ಡಿ ರಹಿತ ಕಿರು ಸಾಲ ಯೋಜನೆಗೆ ಚಾಲನೆ ನೀಡಿದೆ. ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ದೃಷ್ಟಿಯಿಂದ ರಾಜ್ಯ ಸರಕಾರ ಈ ಯೋಜನೆಯನ್ನು ಜಾರಿ ಮಾಡುತ್ತಿದೆ. ಇದರಿಂದ ಮೀಟರ್ ಬಡ್ಡಿ ದಂಧೆಕೋರರ ಆರ್ಭಟಕ್ಕೆ ಕಡಿವಾಣ ಬೀಳಲಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈ ಯೋಜನೆ ರಾಜ್ಯಾದ್ಯಂತ ಜಾರಿಯಾಗಲಿದೆ.
- ಎಸ್.ಎಲ್.ಭೋಜೇಗೌಡ







