ಮಂಡ್ಯ: ಹಾವು ಕಡಿದು ರೈತ ಮೃತ್ಯು

ಮಂಡ್ಯ, ನ.22: ಹಾವು ಕಡಿದು ರೈತ ಸಾವಿಗೀಡಾದ ಘಟನೆ ನಗರದ ಮೈಷುಗರ್ ಕಾರ್ಖಾನೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ತಾಲೂಕಿನ ಬೇಲೂರು ಗ್ರಾಮದ ಬೊಮ್ಮಯ್ಯ(48) ಸಾವನ್ನಪ್ಪಿದ ರೈತ.
ಬೊಮ್ಮಯ್ಯ ಕಾರ್ಖಾನೆಗೆ ಎತ್ತಿನ ಗಾಡಿಯಲ್ಲಿ ಕಬ್ಬು ತಂದು ಪ್ರಾಂಗಣದಲ್ಲೇ ಮಲಗಿದ್ದರು. ಗುರುವಾರ ಬೆಳಿಗ್ಗಿನ ಜಾವ ಕಬ್ಬು ಹಾಕಲು ಸರದಿ ಸಾಲಲ್ಲಿ ಕಬ್ಬು ತುಂಬಿದ್ದ ಎತ್ತಿನಗಾಡಿ ನಿಲ್ಲಿಸಿದ್ದಾಗ ಹಾವು ಕಚ್ಚಿದೆ. ತನಗೆ ಕಚ್ಚಿದ ಹಾವನ್ನು ಕೊಂದು ಬೊಮ್ಮಯ್ಯ ತಾನೂ ಸಾವಿಗೀಡಾಗಿದ್ದಾರೆ. ಕಾರ್ಖಾನೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಇಲ್ಲದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಮೃತನ ರೈತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯ ಮಾಡಿದರು.
ಘಟನೆಯಿಂದ ನೊಂದ ರೈತರು ಕಾರ್ಖಾನೆ ಜಿಎಂ ಬೋರೇಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.
ಶಾಸಕ ಎಂ.ಶ್ರೀನಿವಾಸ್ ಸಮ್ಮುಖದಲ್ಲೇ ತರಾಟೆಗೆ ತೆಗೆದುಕೊಂಡು ಕಾರ್ಖಾನೆಯ ದುಸ್ಥಿತಿ ಹಾಗೂ ಸರಿಯಾಗಿ ಕೆಲಸ ನಿರ್ವಹಿಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತರೊಬ್ಬರು ಹಾಗೂ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಬೋರೇಗೌಡರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕಾಗಮಿಸಿದ ಶಾಸಕ ಎಂ.ಶ್ರೀನಿವಾಸ್ ಹಾಗೂ ಮಾಜಿ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಸಮಾಧಾನಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸ್ಥಳಕ್ಕಾಗಮಿಸಬೇಕು ಎಂದು ಪಟ್ಟುಹಿಡಿದ ರೈತರನ್ನು ಸಮಾಧಾನಪಡಿಸಿ, ಮೃತ ರೈತನ ಕುಟುಂಬಕ್ಕೆ ಐದು ಲಕ್ಷ ರೂಪಾಯಿಗಳ ಪರಿಹಾರದ ಭರವಸೆ ನೀಡಲಾಯಿತು.







