ಕಬ್ಬಿನ ಬೆಲೆ ವಿಚಾರದಲ್ಲಿ ರೈತರಿಗೆ ಅನ್ಯಾಯ ಮಾಡಲಾರೆ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ, ನ.22: ಪ್ರಸಕ್ತ ಸಾಲಿನಲ್ಲಿ ತನ್ನ ಒಡೆತನದ ಹರ್ಷಾ ಶುಗರ್ಸ್ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿದ್ದು, ಕಬ್ಬು ನುರಿಸುವ ಹಂಗಾಮು ಆರಂಭವಾಗಿದೆ. ಕಬ್ಬಿನ ಬೆಲೆ ವಿಷಯದಲ್ಲಿ ಸರಕಾರ ಮತ್ತು ಕಾರ್ಖಾನೆ ಮಾಲಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡುತ್ತಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ತಿಳಿಸಿದ್ದಾರೆ.
ಗುರುವಾರ ತಮ್ಮ ಮತ ಕ್ಷೇತ್ರದ ವ್ಯಾಪ್ತಿಗೊಳಪಡುವ ಸುವರ್ಣ ವಿಧಾನಸೌಧದ ಎದುರು 10 ಹೊಸ ಬಸ್ಸುಗಳಿಗೆ ಹಸಿರು ನಿಶಾನೆ ತೋರಿದ ಬಳಿಕ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.
ಈ ಉದ್ಯಮದಲ್ಲಿ ನಾನು ಹೊಸಬಳು. ಕಬ್ಬಿನ ಬೆಲೆ ನೀಡುವ ವಿಷಯದಲ್ಲಿ ನಾನಂತೂ ರೈತರಿಗೆ ಅನ್ಯಾಯ ಮಾಡುವುದಿಲ್ಲ. ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧಳಾಗಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲಕರ ಸಭೆಗೆ ನನಗೆ ಆಹ್ವಾನ ನೀಡಿದ್ದರೆ ಹೋಗುತ್ತಿದ್ದೆ ಎಂದು ಅವರು ಹೇಳಿದರು.
ರೈತ ಮಹಿಳೆಯ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ರೈತ ಮಹಿಳೆ ಮತ್ತು ಕುಮಾರಸ್ವಾಮಿ ಇಬ್ಬರೂ ಈಗಾಗಲೆ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ನಾನು ಹೆಚ್ಚು ಮಾತನಾಡುವುದಿಲ್ಲ. ಜೆಡಿಎಸ್ ಪಕ್ಷದ ಚಿಹ್ನೆ ರೈತ ಮಹಿಳೆಯಾಗಿದೆ. ಜೆಡಿಎಸ್ ಪಕ್ಷ ರೈತ ಮಹಿಳೆಯನ್ನು ಗೌರವಿಸಿ ಪೂಜಿಸುತ್ತಿರುವಾಗ ಮುಖ್ಯಮಂತ್ರಿ, ರೈತ ಮಹಿಳೆಯ ಬಗ್ಗೆ ಹಗುರವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ದಿನನಿತ್ಯ ಬೆಳಗಾವಿಗೆ ಉದ್ಯೋಗಕ್ಕೆ ಬರುತ್ತಾರೆ. ವಿದ್ಯಾರ್ಥಿಗಳು ದಿನನಿತ್ಯ ಓಡಾಡುತ್ತಾರೆ. ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಜನರಿಗೆ ಆಗುತ್ತಿರುವ ಅನಾನುಕೂಲತೆಯಿಂದ ಆಗುತ್ತಿರುವ ತೊಂದರೆಯನ್ನು ಸಾರಿಗೆ ಸಚಿವರ ಗಮನಕ್ಕೆ ತರಲಾಗಿತ್ತು ಎಂದು ಲಕ್ಷ್ಮಿಹೆಬ್ಬಾಳ್ಕರ್ ತಿಳಿಸಿದರು.
20 ಹೊಸ ಬಸ್ಸುಗಳನ್ನು ಬಿಡುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ಪ್ರಥಮ ಹಂತದಲ್ಲಿ 10 ಬಸ್ಸುಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಭಾಗದಲ್ಲಿ ಸಂಚರಿಸುವ ಬಸ್ಸುಗಳು ಹಳೆಯದಾಗಿದ್ದು, ಮಳೆಗಾಲದಲ್ಲಿ ಸೋರುತ್ತಿದ್ದವು. ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹೊಸ ಬಸ್ಸುಗಳನ್ನು ಮಂಜೂರು ಮಾಡಿಸಲಾಗಿದೆ. ಇನ್ನುಳಿದ 10 ಬಸ್ಸುಗಳು ಶೀಘ್ರದಲ್ಲಿಯೆ ಸಂಚರಿಸಲಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ್, ಕಾಂಗ್ರೆಸ್ ಮುಖಂಡ ಯುವರಾಜ್ ಕದಂ, ಸುರೇಶ್ ಇಟಗಿ, ಸುರೇಶ್ ಕಂಬಿ, ಗೋಪಾಲಗೌಡ ಪಾಟೀಲ್, ಮಾರುತಿ ಸನದಿ, ಅಡಿವೇಶ ಇಟಗಿ, ಸಿ.ಸಿ.ಪಾಟೀಲ್, ಶ್ರೀಕಾಂತ ಭರಮಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







