ಮಂಗಳೂರು ತಾಪಂ ಸಾಮಾನ್ಯ ಸಭೆ: ಚುನಾವಣೆ ನಡೆಸದೆ ಸ್ಥಾಯಿ ಸಮಿತಿಗೆ ಆಯ್ಕೆಗೆ ಪ್ರತಿಪಕ್ಷ ವಿರೋಧ

ಮಂಗಳೂರು, ನ. 22: ಚುನಾವಣಾ ಪ್ರಕ್ರಿಯೆಯನ್ನು ನಡೆಸದೆ ಸ್ಥಾಯಿ ಸಮಿತಿಗೆ ಎರಡನೇ ಅವಧಿಗೆ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಗುರುವಾರ ನಡೆದ ಮಂಗಳೂರು ತಾಪಂ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.
ವಿಪಕ್ಷವನ್ನು ಗಣನೆಗೆ ತೆಗೆದುಕೊಳ್ಳದೆ ಸ್ಥಾಯಿ ಸಮಿತಿಗೆ ಏಕಪಕ್ಷೀಯವಾಗಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಸದಸ್ಯರು ದೂರಿದರೆ, ಎರಡೂ ಪಕ್ಷದಿಂದ ತಲಾ 9 ಮಂದಿ ಸದಸ್ಯರ ಹೆಸರು ಪಡೆದುಕೊಂಡೇ ಸ್ಥಾಯಿ ಸಮಿತಿಗೆ ನೇಮಕ ಮಾಡಲಾಗಿದೆ ಎಂದು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಸಮಜಾಯಿಷಿ ನೀಡಿದರು.
ಇದರಿಂದ ಸಮಾಧಾನಗೊಳ್ಳದ ಸದಸ್ಯರಾದ ವಿಶ್ವನಾಥ್, ಶುಭಲತಾ ಶೆಟ್ಟಿ, ವಜ್ರಾಕ್ಷಿ ಶೆಟ್ಟಿ ವಿಪಕ್ಷ ಸದಸ್ಯರಿಗೆ ಸಮಿತಿ ಆಯ್ಕೆ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಅಲ್ಲದೆ ಹಿಂದಿನ ಅಧ್ಯಕ್ಷರನ್ನು ಬದಲಾಯಿಸದೆ ಯಥಾ ಪ್ರಕಾರ ಅವರನ್ನೇ ಮುಂದುವರಿಸಲಾಗಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಹಮ್ಮದ್ ಮೋನು, ಸ್ಥಾಯಿ ಸಮಿತಿಗೆ ಹೊಸ ಸದಸ್ಯರನ್ನು ನೇಮಕ ಮಾಡಿದ ಬಳಿಕ ಎರಡು ಬಾರಿ ಸ್ಥಾಯಿ ಸಮಿತಿ ಸಭೆ ನಡೆಸಲಾಗಿದೆ. ಆವಾಗ ಆಕ್ಷೇಪವೆತ್ತದವರು ಈಗ ನೇಮಕ ಕುರಿತಂತೆ ಪ್ರಸ್ತಾವಿಸುವುದರ ಹಿಂದಿನ ಔಚಿತ್ಯವೇನು ಎಂದು ಪ್ರಶ್ನಿಸಿದರು.
ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಹಾಗೂ ಸದಸ್ಯ ಜನಾರ್ದನ ಗೌಡ ಮಾತನಾಡಿ, ಚುನಾವಣಾ ಪ್ರಕ್ರಿಯೆ ನಡೆಸಿ ನಿಯಮಾನುಸಾರವಾಗಿ ಸ್ಥಾಯಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವುದು ಕ್ರಮ. ಆದರೆ ಇಲ್ಲಿ ಹಾಗೇ ಆಗಿಲ್ಲ. ಹಾಗಾಗಿ ಈ ಆಯ್ಕೆ ಪ್ರಕ್ರಿಯೆ ಕ್ರಮಬದ್ಧ ಅಲ್ಲ ಎಂದರು.
ವಿಪಕ್ಷದ ಗಣನೆಗೆ ಬಾರದೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಹೇಗಾಯಿತು ಎಂಬ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದ ತಾಪಂ ಸಹಾಯಕ ನಿರ್ದೇಶಕ ಸದಾನಂದ, ನನಗೆ ಎರಡೂ ಪಕ್ಷಗಳು ಸದಸ್ಯರ ಪಟ್ಟಿಯನ್ನು ಸಲ್ಲಿಸಿದ್ದರು. ಬಳಿಕ ಅಧ್ಯಕ್ಷರ ಸೂಚನೆ ಮೇರೆಗೆ ಸ್ಥಾಯಿ ಸಮಿತಿಗಳಿಗೆ ನೇಮಕಗೊಳಿಸಲಾಗಿದೆ ಎಂದರು.
ಈಗಿರುವ ಆಯ್ಕೆಯನ್ನು ರದ್ದು ಮಾಡಿ ಚುನಾವಣೆ ಮೂಲಕ ಮರು ಆಯ್ಕೆ ನಡೆಸಬೇಕು ಎಂದು ಸದಸ್ಯ ಶುಭಲತಾ ಶೆಟ್ಟಿ ಆಗ್ರಹಿಸಿದರು.
ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಸುಧಾಕರ್ ಮಾತನಾಡಿ ಈಗಾಗಲೆ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ನಡೆದಿದೆ. ಆದರೆ ಆಯ್ಕೆ ಬಗ್ಗೆ ಅಸಮಾಧಾನಗಳಿದ್ದರೆ ಆರು ತಿಂಗಳ ಬಳಿಕ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ರೀಟಾ ಕುಟಿನ್ಹಾ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಯು. ಪಿ. ಇಬ್ರಾಹೀಂ ಉಪಸ್ಥಿತರಿದ್ದರು.
94ಸಿ: 7 ಸಾವಿರ ಅರ್ಜಿ ತಿರಸ್ಕೃತ !
94ಸಿಸಿಯಲ್ಲಿ 21,769 ಅರ್ಜಿಗಳು ಸ್ವೀಕೃತವಾಗಿದ್ದು, 10ಮ859 ಹಕ್ಕುಪತ್ರ ವಿತರಣೆಯಾಗಿದೆ. 4,456 ಅರ್ಜಿ ಬಾಕಿ ಇದೆ. ಆದರೆ 94 ಸಿಯಲ್ಲಿ 8,070 ಅರ್ಜಿ ಬಂದಿದ್ದು, 137ಕ್ಕೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. 152 ಅರ್ಜಿ ಮಂಜೂರಾಗಿದ್ದು ಉಳಿದ 7,918 ಅರ್ಜಿ ತಿರಸ್ಕೃತಗೊಂಡಿದೆ. ಆದರೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅರ್ಜಿ ತಿರಸ್ಕೃತಗೊಳ್ಳಲು ಕಾರಣ ಏನು ಎಂದು ಸದಸ್ಯ ಶ್ರೀಧರ್ ಪ್ರಶ್ನಿಸಿದರು.
ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಕಂದಾಯ ಅಧಿಕಾರಿ ತಿಳಿಸಿದರೆ, ತಹಶೀಲ್ದಾರರನ್ನು ಸಭೆಗೆ ಕರೆಸಿ ಅರ್ಜಿ ತಿರಸ್ಕೃತಗೊಳ್ಳಲು ಕಾರಣವೇನೆಂದು ಮಾಹಿತಿ ಕೇಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಶಾಸಕರು ಭಾಗವಹಿಸಿದ್ದು ತಪ್ಪೇ?
ತಾಪಂ ಇಒ ಅವರ ಕಾರ್ಯ ನಿರ್ವಹಣೆ ಕುರಿತು ಮಾಧ್ಯಮಗಳಲ್ಲಿ ಇತ್ತೀಚೆಗೆ ವರದಿಯಾದ ಕುರಿತು ಮತ್ತು ಆ ಬಳಿಕದ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಸಭೆಯ ನಡಾವಳಿಯ ಪಾಲನಾ ವರದಿಯಲ್ಲಿ ಬರೆದಿರುವುದು ಮೇಲ್ನೋಟಕ್ಕೆ ರಾಜಕೀಯವಾಗಿ ಬರೆದಂತೆ ಕಂಡು ಬರುತ್ತಿದೆ. ಕಳೆದ ಬಾರಿಯ ಸಭೆಯಲ್ಲಿ ಎಲ್ಲಿಯೂ ಶಾಸಕರ ಹೆಸರು ಪ್ರಸ್ತಾಪ ಮಾಡದಿದ್ದರೂ ಪಾಲನಾ ವರದಿಯಲ್ಲಿ ಅನಗತ್ಯವಾಗಿ ಶಾಸಕರನ್ನು ಎಳೆದು ತರಲಾಗಿದೆ ಎಂದು ಸದಸ್ಯ ರವಿಶಂಕರ್ ಸೋಮೇಶ್ವರ ಆಪಾದಿಸಿದರು.
ಶಾಸಕರು ಆಗಮಿಸಿರುವುದು ತಾಪಂ ಆಡಳಿತ ವ್ಯವಸ್ಥೆಗೆ ಧಕ್ಕೆಯುಂಟಾಗಿದೆ ಎಂದು ಬರೆಯಲಾಗಿದೆ. ಹಾಗಾದರೆ ವ್ಯವಸ್ಥೆಯಲ್ಲಿ ಉಂಟಾದ ತೊಂದರೆ ಗಳನ್ನು ಪ್ರಶ್ನಿಸುವ ಅಧಿಕಾರ ಶಾಸಕರಿಗೆ ಇಲ್ಲವೇ ಎಂದು ರವಿಶಂಕರ್ ಸೋಮೇಶ್ವರ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾರ ಇಒ ಸುಧಾಕರ್ ಭವಿಷ್ಯದಲ್ಲಿ ಇಂತಹ ತಪ್ಪುಗಳಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.