ಕಳೆದು ಹೋದ ಬದುಕಿನ ಹುಡುಕಾಟದಲ್ಲಿ ಕೊಡಗಿನ ಸಂತ್ರಸ್ತರು
ಹೆಬ್ಬೆಟ್ಟಗೇರಿಯಲ್ಲಿ ಮಣ್ಣಿನಡಿ ಸಿಕ್ಕಿತು ಹಣ, ಚಿನ್ನಾಭರಣ

ಮಡಿಕೇರಿ, ನ.21: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ನೂರಾರು ಕುಟುಂಬಗಳು ಇಂದಿಗೂ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿವೆ. ಮಹಾಮಳೆಗೆ ಕುಸಿದ ಬೆಟ್ಟದ ಮಣ್ಣಿನ ರಾಶಿಯಡಿ ಸಿಲುಕಿಕೊಂಡ ಮನೆಗಳ ಅವಶೇಷಗಳಡಿಯಲ್ಲಿ ಹೂತು ಹೋಗಿರುವ ವಸ್ತುಗಳಿಗಾಗಿ ಹುಡುಕಾಟ ನಡೆಯುತ್ತಲೇ ಇದೆ.
ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ಆಗಸ್ಟ್ 16ರ ಬೆಳಿಗ್ಗೆ 7.45 ಗಂಟೆಗೆ ಜಲಸ್ಫೋಟದೊಂದಿಗೆ ಭಾರೀ ಬೆಟ್ಟ ಕುಸಿದು ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮನೆಯೊಳಗಿದ್ದ ವೃದ್ದೆಯೊಬ್ಬರು ಭೂ ಸಮಾಧಿಯಾಗಿದ್ದರು. ಇದೇ ಮನೆಯೊಳಗಿದ್ದ ಮಿನ್ನಂಡ ಗಣಪತಿ ಮತ್ತವರ ಕುಟುಂಬ ಸದಸ್ಯರು ಪವಾಡದ ರೀತಿಯಲ್ಲಿ ಜೀವ ಉಳಿಸಿಕೊಂಡಿದ್ದರು. ಆದರೆ ಕಣ್ಣೇದುರೇ ಹೂತು ಹೋದ ಹೆತ್ತಾಕೆಯನ್ನು ಹೊರಗೆಳೆಯಲು 40 ಅಡಿ ಎತ್ತರದ ಕೆಸರಿನ ಪ್ರವಾಹ ಬಿಡಲಿಲ್ಲ. ಈ ದುರ್ಘಟನೆ ನಡೆದ 7 ದಿನಗಳ ಬಳಿಕ ರಕ್ಷಣಾ ಕಾರ್ಯಚರಣೆ ನಡೆಸಿ ಉಮ್ಮವ್ವ ಅವರ ದೇಹವನ್ನು ಹೊರ ತೆಗೆಯಲಾಗಿತ್ತು. ಆದರೆ ಕಳೆದ 6 ತಿಂಗಳ ಹಿಂದೆ ಗೃಹ ಪ್ರವೇಶವಾಗಿದ್ದ ಮಿನ್ನಂಡ ಗಣಪತಿ ಅವರ 15 ಲಕ್ಷದ ಮನೆ ಸಂಪೂರ್ಣ ನೆಲಕಚ್ಚಿತ್ತು. ಉಟ್ಟ ಬಟ್ಟೆ, ಖಾಲಿ ಹೊಟ್ಟೆಯಲ್ಲೇ ಬಂಧುಗಳ ಮನೆಯಲ್ಲಿ ಆಶ್ರಯ ಪಡೆದ ಗಣಪತಿ ಕುಟುಂಬ ಕಳೆದೆರಡು ದಿನಗಳಿಂದ ಜೆಸಿಬಿ ಯಂತ್ರದಲ್ಲಿ ನಾಮಾವಶೇಷಗೊಂಡ ಮನೆಯಿಂದ ಅಳಿದುಳಿದ ವಸ್ತುಗಳನ್ನು ಹುಡುಕುವ ಪ್ರಯತ್ನ ನಡೆಸಿತು.
ನೀರು ಪಾಲಾದ ಸ್ಥಿತಿಯಲ್ಲಿದ್ದ 2 ಕ್ವಿಂಟಾಲ್ ಕರಿಮೆಣಸು, ಹರಿದ ಬಟ್ಟೆಗಳು, ಮುರಿದ ಮಂಚ, ಕೆಸರು ಮೆತ್ತಿಕೊಂಡ ಕೆಲವು ದಾಖಲೆಗಳು ಸಿಕ್ಕಿದ್ದವು. ಶೋಧ ಮುಂದುವರಿಸುತ್ತಿದ್ದಂತೆಯೇ ಅಮ್ಮವ್ವ ಅವರ 1 ಚಿನ್ನದ ಉಂಗುರ, 1 ಜೊತೆ ಓಲೆ, ತಿಂಗಳ ಖರ್ಚಿಗೆಂದು ಮನೆಯಲ್ಲಿಟ್ಟದ್ದ 10 ಸಾವಿರ ರೂ. ನಗದು ಕೆಸರು ಮೆತ್ತಿದ ಸ್ಥಿತಿಯಲ್ಲಿ ಮಣ್ಣಿನಡಿಯಲ್ಲಿ ಪ್ತತೆಯಾದವು.
ಕೊಡವ ಸಂಪ್ರದಾಯದ ತೆಂಗಿನ ಎಣ್ಣೆಯ 2 ಬಟ್ಟಲು, ಮುರಿದು ತುಂಡರಿಸಲ್ಪಟ್ಟ ಸ್ಥಿತಿಯಲ್ಲಿದ್ದ ಜೋಡಿ ನಳಿಕೆಯ 1 ಜಮ್ಮಾ ಬಂದೂಕು, ಅಡುಗೆ ಸಿಲಿಂಡರ್ ಮತ್ತು ಬೆಳ್ಳಿಯ ಪೀಚೆಕತ್ತಿ ಮಾತ್ರ ಈ ಬಡ ನಿರ್ವಸತಿಕ ಕುಟುಂಬದ ಪಾಲಾಯಿತು.
ಈ ಸಂದರ್ಭ ಮಾತನಾಡಿದ ಉಮ್ಮವ್ವ ಅವರ ಪುತ್ರ ಮಿನ್ನಂಡ ಗಣಪತಿ, ನಮಗೆ ಬಂದಂತ ಸ್ಥಿತಿ ಮತ್ತ್ಯಾರಿಗೂ ಬಾರದಿರಲಿ. ಕಣ್ಣ ಮುಂದೆ ಮಣ್ಣಿನಡಿ ಹೂತು ಹೋದ ತಾಯಿಯ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ದುಡಿದು ಕಟ್ಟಿದ ಮನೆಯೂ ಉಳಿಯಲಿಲ್ಲ. ಮನೆ ನಾಶವಾದ ಹಿನ್ನೆಲೆಯಲ್ಲಿ ಸರಕಾರ 1.2 ಲಕ್ಷ ರೂ. ಹಣ, ಗಂಜಿ ಕೇಂದ್ರದಲ್ಲಿದ್ದ ಸಂದರ್ಭ 3800 ರೂ. ಪರಿಹಾರ ಮತ್ತು ವಿವಿಧ ಸಂಘ-ಸಂಸ್ಥೆಗಳು ನಮ್ಮ ನೆರವಿಗೆ ಬಂದಿವೆ. ಸರಕಾರ ಸಾಧ್ಯವಾದಷ್ಟು ಬೇಗ ನಿರಾಶ್ರಿತರಿಗೆ ಮನೆ ಕಟ್ಟಿಕೊಡಬೇಕು ಎಂದು ಹೇಳಿದರು.
ಮಹಾಮಳೆಗೆ ಸಿಲುಕಿ ಬೀದಿಪಾಲಾದ ನೂರಾರು ಕುಟುಂಬಗಳು ಇಂದಿಗೂ ಅತಂತ್ರ ಸ್ಥಿತಿಯಲ್ಲೇ ಜೀವನ ಸಾಗಿಸುತ್ತಿದ್ದು, ಕಳೆದು ಹೋದ ಬದುಕನ್ನು ಹುಡುಕುವ ಪ್ರಯತ್ನದಲ್ಲೇ ದಿನ ದೂಡುತ್ತಿದ್ದಾರೆ.







