ದಾವಣಗೆರೆ: ಚೂರಿಯಿಂದ ಇರಿದು ಯುವಕನ ಬರ್ಬರ ಕೊಲೆ

ದಾವಣಗೆರೆ,ನ.22: ಹಾಡಹಗಲೇ ಚಾಕುವಿನಿಂದ ಯುವಕನನ್ನು ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಡಾವಣೆ ಪೊಲೀಸ್ ಠಾಣೆ ಎದುರಿನ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ನಗರದ ಎಸ್.ಎಂ. ಕೃಷ್ಣನಗರದ ನಿವಾಸಿ ಬಸವರಾಜ್ (24) ಕೊಲೆಯಾದ ಯುವಕ. 2 ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಯುವಕನ ಹೊಟ್ಟೆಗೆ ಇರಿಯಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮೃತ ಬಸವರಾಜ್ ಐಟಿಐ ಮುಗಿಸಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ಎರಡು ದಿನಗಳ ಹಿಂದೆ ವಿಕಾಸ್ ಮತ್ತು ಅಜಯ್ ಎಂಬುವರ ನಡುವೆ ಗಲಾಟೆ ನಡೆದಿತ್ತು. ಇಂದು ವಿಕಾಸ್ ತನ್ನ ಸ್ನೇಹಿತ ಬಸವರಾಜನನ್ನು ಹೈಸ್ಕೂಲ್ ಮೈದಾನಕ್ಕೆ ಕರೆಸಿ, ಬಳಿಕ ಮಾತಿನ ಚಕಮಕಿ ನಡೆದು ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭ ವಿಕಾಸ್ ನ ಸ್ನೇಹಿತರು ಬಸವರಾಜ್‍ಗೆ ಚಾಕುವಿನಿಂದ ಇರಿದಿದ್ದಾರೆ. ಗಾಯಗೊಂಡ ಆತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





