ಡಿ. 2ರಿಂದ ಧರ್ಮಸ್ಥಳ ಲಕ್ಷ ದೀಪೋತ್ಸವ: ಸರ್ವಧರ್ಮ, ಸಾಹಿತ್ಯ ಸಮ್ಮೇಳನಗಳ 86ನೇ ಅಧಿವೇಶನ
ಬೆಳ್ತಂಗಡಿ, ನ. 22: ನಾಡಿನ ಪವಿತ್ರ ಯಾತ್ರಾಸ್ಥಳ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಕಾರ್ತಿಕ ಲಕ್ಷದೀಪೋತ್ಸವ ಡಿ. 2 ರಿಂದ 7 ವರೆಗೆ ನಡೆಯಲಿದ್ದು ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನದ 86ನೇ ಅವೇಶನ ಡಿ. 5 ಮತ್ತು 6 ರಂದು ನಡೆಯಲಿದೆ. 86ನೇ ಸರ್ವಧರ್ಮ ಸಮ್ಮೇಳನವನ್ನು ಗುಜರಾತಿನ ದ್ವಾರಕದ ಜಗದ್ಗುರು ಸೂರ್ಯಾಚಾರ್ಯ ಶ್ರೀ ಕೃಷ್ಣದೇವನಂದಗಿರಿ ಮಹಾರಾಜ್ ಹಾಗೂ ಸಾಹಿತ್ಯ ಸಮ್ಮೇಳನವನ್ನು ಉದ್ಯಮಿ ವಿಜಯ ಸಂಕೇಶ್ವರ ಉದ್ಘಾಟಿಸಲಿದ್ದಾರೆ.
ಸರ್ವಧರ್ಮ ಸಮ್ಮೇಳನ ನ. 5ರಂದು ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನದ 86ನೇ ಅವೇಶನವನ್ನು ಗುಜರಾತಿನ ದ್ವಾರಕದ ಜಗದ್ಗುರು ಸೂರ್ಯಾಚಾರ್ಯ ಶ್ರೀ ಕೃಷ್ಣದೇವನಂದಗಿರಿ ಮಹಾರಾಜ್ ಉದ್ಘಾಟಿಸಲಿದ್ದಾರೆ. ಶಿಕ್ಷಣ ತಜ್ಞ, ಸಮಾಜ ಸುಧಾರಕ ಬೆಂಗಳೂರಿನ ಶ್ರೀ ಎಂ( ಮಮ್ತಾಜ್ ಆಲಿ) ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಜೆ. ಆರ್. ಲೋಬೋ, ಮಹಾಲಿಂಗಪುರದ ಸೂಫಿ ಸಂತ ಪದ್ಮಶ್ರೀ ಇಬ್ರಾಹಿಂ ಸುತಾರ ಹಾಗೂ ಚಲನಚಿತ್ರ ಕಲಾವಿದ ಶ್ರೀಧರ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಸಾಹಿತ್ಯ ಸಮ್ಮೇಳನ ಡಿ. 6 ರಂದು ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ 86ನೇ ಅವೇಶನವನ್ನು ಉದ್ಯಮಿ ವಿಜಯ ಸಂಕೇಶ್ವರ ಉದ್ಘಾಟಿಸಲಿದ್ದಾರೆ. ಖ್ಯಾತ ವಿಮರ್ಶಕ ಸಾಗರದ ಪ್ರೊ. ಟಿ.ಪಿ. ಅಶೋಕ್ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ. ಎಸ್‍ಪಿ ಡಾ. ಬಿ.ಆರ್. ರವೀಕಾಂತೇ ಗೌಡ, ಚಲನಚಿತ್ರ ನಿರ್ದೇಶಕ ಎಂ. ಅಬ್ದುಲ್ ರೆಹಮಾನ್ ಪಾಷ ಹಾಗೂ ಅಂಕಣಕಾರ್ತಿ ಕವಿತಾ ಅಡೂರು ಉಪನ್ಯಾಸ ನೀಡಲಿದ್ದಾರೆ.