ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಜೊತೆ ಘರ್ಷಣೆಗಿಳಿದ ಟ್ರಂಪ್!

ವಾಶಿಂಗ್ಟನ್, ನ. 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರೊಂದಿಗೇ ಘರ್ಷಣೆಗಿಳಿದಿದ್ದಾರೆ. ನ್ಯಾಯಾಂಗದ ಕೆಲವು ವಲಯಗಳಲ್ಲಿ ತನ್ನ ನೀತಿಗಳ ಬಗ್ಗೆ ‘ಆಘಾತಕಾರಿ’ ಪಕ್ಷಪಾತಪೂರಿತ ಭಾವನೆಗಳಿವೆ ಎಂದು ಅವರು ಹೇಳಿದ್ದಾರೆ.
ಒಂಬತ್ತನೇ ಸರ್ಕೀಟ್ ಮೇಲ್ಮನವಿ ನ್ಯಾಯಾಲಯದ ವಿರುದ್ಧ ಕೆಂಡ ಕಾರಿದ ಅವರು, ‘‘ಅದರ ತೀರ್ಪುಗಳು ನಮ್ಮ ದೇಶವನ್ನು ಅಸುರಕ್ಷಿತವನ್ನಾಗಿ ಮಾಡಿವೆ! ಅತ್ಯಂತ ಅಪಾಯಕಾರಿ ಹಾಗೂ ತಿಳುವಳಿಕೆಗೇಡು!’’ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.
ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸುವ ವಲಸಿಗರಿಗೆ ಆಶ್ರಯ ನಿರಾಕರಿಸುವ ಟ್ರಂಪ್ ಆದೇಶಕ್ಕೆ ಸಾನ್‌ಫ್ರಾನ್ಸಿಸ್ಕೊದ ಜಿಲ್ಲಾ ನ್ಯಾಯಾಧೀಶ ಜಾನ್ ಟಿಗರ್ ತಡೆಯಾಜ್ಞೆ ನೀಡಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ನಮ್ಮಲ್ಲಿ ಒಬಾಮ ನ್ಯಾಯಾಧೀಶ, ಟ್ರಂಪ್ ನ್ಯಾಯಾಧೀಶರಿಲ್ಲ: ಮುಖ್ಯ ನ್ಯಾಯಾಧೀಶ
ಇದಕ್ಕೂ ಮೊದಲು, ಸಾಮಾನ್ಯವಾಗಿ ರಾಜಕೀಯ ಹೇಳಿಕೆಗಳನ್ನು ನೀಡದ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್, ಟ್ರಂಪ್ ನ್ಯಾಯಾಲಯಗಳನ್ನು ಟೀಕಿಸುವುದನ್ನು ಟೀಕಿಸಿದ್ದರು. ನ್ಯಾಯಾಂಗ ಸ್ವತಂತ್ರವಾಗಿದೆ ಎಂದು ಹೇಳಿದ್ದರು.
ಹಿಂದಿನ ಡೆಮಾಕ್ರಟಿಕ್ ಆಡಳಿತಗಳ ಅಧ್ಯಕ್ಷರಿಂದ ನೇಮಿಸಲ್ಪಟ್ಟಿರುವ ನ್ಯಾಯಾಧೀಶರು ಈಗಿನ ಆಡಳಿತದ ವಿರುದ್ಧ ವರ್ತಿಸುತ್ತಿದ್ದಾರೆ ಎಂಬ ಟ್ರಂಪ್ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಬರ್ಟ್ಸ್, ‘‘ನಮ್ಮಲ್ಲಿ ಒಬಾಮ ನ್ಯಾಯಾಧೀಶರು ಅಥವಾ ಟ್ರಂಪ್ ನ್ಯಾಯಾಧೀಶರು ಅಥವಾ ಬುಶ್ ನ್ಯಾಯಾಧೀಶರು ಅಥವಾ ಕ್ಲಿಂಟನ್ ನ್ಯಾಯಾಧೀಶರು ಎಂಬುದಾಗಿ ಇಲ್ಲ’’ ಎಂದು ಹೇಳಿದ್ದರು.
‘‘ನಮ್ಮಲ್ಲಿರುವುದು ಸಮರ್ಪಣಾ ಮನೋಭಾವದ ನ್ಯಾಯಾಧೀಶರ ಅಮೋಘ ಗುಂಪು. ತಮ್ಮ ಮುಂದೆ ಬರುವವರಿಗೆ ಸಮಾನ ಹಕ್ಕನ್ನು ಖಾತರಿಪಡಿಸಲು ಅವರು ತಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ’’ ಎಂದಿದ್ದರು.
‘‘ಈ ಮಾದರಿಯ ಸ್ವತಂತ್ರ ನ್ಯಾಯಾಂಗಕ್ಕೆ ನಾವೆಲ್ಲರೂ ಕೃತಜ್ಞರಾಗಿರಬೇಕಾಗಿದೆ’’ ಎಂಬುದಾಗಿ ಕಿರು ಹೇಳಿಕೆಯಲ್ಲಿ ಮುಖ್ಯ ನ್ಯಾಯಾಧೀಶರು ಹೇಳಿದ್ದರು.
ಟ್ರಂಪ್ಫ್ಲೋರಿಡದಲ್ಲಿ ರಜೆಯಲ್ಲಿರುವ ಟ್ರಂಪ್ ಮುಖ್ಯ ನ್ಯಾಯಾಧೀಶರ ಹೇಳಿಕೆಗೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿದರು.
‘‘ಕ್ಷಮಿಸಿ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್, ನಿಮ್ಮಲ್ಲಿ ನಿಜವಾಗಿಯೂ ಒಬಾಮ ನ್ಯಾಯಾಧೀಶರಿದ್ದಾರೆ. ಅವರು ನಮ್ಮ ದೇಶದ ರಕ್ಷಣೆಯ ಹೊಣೆಯನ್ನು ಹೊತ್ತಿರುವ ಜನರಿಗಿಂತ ತುಂಬಾ ಭಿನ್ನ ನಿಲುವನ್ನು ಹೊಂದಿದ್ದಾರೆ’’ ಎಂದರು.







