ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣ: ನವ್ಲಾಖ ಸಹಿತ ಮೂವರನ್ನು ಡಿ.14ರವರೆಗೆ ಬಂಧಿಸದಂತೆ ಸೂಚನೆ

ಮುಂಬೈ, ನ.22: ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮೂವರು ಹೋರಾಟಗಾರರಿಗೆ ನೀಡಲಾಗಿದ್ದ ಬಂಧನದಿಂದ ರಕ್ಷಣೆಯ ಅವಧಿಯನ್ನು ಬಾಂಬೆ ಹೈಕೋರ್ಟ್ ಡಿಸೆಂಬರ್ 14ರವರೆಗೆ ವಿಸ್ತರಿಸಿದೆ.
ಮಾನವ ಹಕ್ಕು ಹೋರಾಟಗಾರ ಗೌತಮ್ ನವ್ಲಾಖ, ನಾಗರಿಕ ಹಕ್ಕು ಹೋರಾಟಗಾರ ಆನಂದ್ ತೇಲ್ತುಂಬ್ಡೆ ಹಾಗೂ ಹೋರಾಟಗಾರ ಸ್ಟಾನ್ ಸ್ವಾಮಿಗೆ ಈ ಹಿಂದೆ ನೀಡಲಾಗಿದ್ದ ಬಂಧನದಿಂದ ರಕ್ಷಣೆಯ ಅವಧಿ ನವೆಂಬರ್ 21ಕ್ಕೆ ಅಂತ್ಯವಾಗಿದ್ದು, ಇದೀಗ ಇದನ್ನು ಹೈಕೋರ್ಟ್ ಡಿ.14ರವರೆಗೆ ವಿಸ್ತರಿಸಿದೆ. ಈ ಮಧ್ಯೆ, ಆರೋಪಪಟ್ಟಿಯಿಂದ ತನ್ನ ಹೆಸರನ್ನು ಕೈಬಿಡುವಂತೆ ನವ್ಲಾಖ ಸಲ್ಲಿಸಿದ್ದ ಅರ್ಜಿಗೆ ಸರಕಾರಿ ಅಭಿಯೋಜಕರು ತೀವ್ರ ವಿರೋಧ ಸೂಚಿಸಿದರು. ನವ್ಲಾಖ ವಿರುದ್ಧ ಸಾಕಷ್ಟು ಪುರಾವೆಗಳಿವೆ. ಆದ್ದರಿಂದ ಅವರ ಹೆಸರನ್ನು ಆರೋಪಪಟ್ಟಿಯಿಂದ ರದ್ದುಗೊಳಿಸಬಾರದು ಎಂದು ವಾದ ಮಂಡಿಸಿದ ಸರಕಾರಿ ಅಭಿಯೋಜಕರನ್ನು ತರಾಟೆಗೆತ್ತಿಕೊಂಡ ನ್ಯಾಯಪೀಠ, ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದೆದುರು ಡಿ.4ರೊಳಗೆ ಪ್ರಸ್ತುತಪಡಿಸಲು ಸೂಚಿಸಿತು.
ಸುಪ್ರೀಂಕೋರ್ಟ್‌ನ ಆದೇಶದ ಬಳಿಕ ಆಗಸ್ಟ್ 29ರಂದು ಐವರು ಸಾಮಾಜಿಕ ಕಾರ್ಯಕರ್ತರಾದ ವರವರ ರಾವ್, ಅರುಣ್ ಫೆರೇರಾಮ ವೆರ್ನಾನ್ ಗೋನ್ಸಾಲ್ವೆಸ್, ಸುಧಾ ಭಾರದ್ವಾಜ್ ಮತ್ತು ಗೌತಮ್ ನವ್ಲಾಖರನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿತ್ತು. ಆಗಸ್ಟ್ 28ರಂದು ಗೋವಾದಲ್ಲಿ ಆನಂದ್ ತೇಲ್ತುಂಬ್ಡೆ ಹಾಗೂ ರಾಂಚಿಯಲ್ಲಿ ಸ್ಟಾನ್ ಸ್ವಾಮಿಯ ಮನೆಯ ಮೇಲೆ ಪೊಲೀಸರ ದಾಳಿ ನಡೆದಿದ್ದರೂ ಇವರನ್ನು ಬಂಧಿಸಿರಲಿಲ್ಲ. ಅಕ್ಟೋಬರ್ 1ರಂದು ದಿಲ್ಲಿ ಹೈಕೋರ್ಟ್ ನವ್ಲಾಖರನ್ನು ಗೃಹಬಂಧನದಿಂದ ಮುಕ್ತಗೊಳಿಸಿತ್ತು.







