ಉಡುಪಿ: ನಗರ ಅನಿಲ ವಿತರಣಾ ಯೋಜನೆಗೆ ಚಾಲನೆ

ಉಡುಪಿ, ನ.22: ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ನಿಯಂತ್ರಕ ಮಂಡಳಿ ವತಿಯಿಂದ ಅನುಷ್ಠಾನಗೊಳ್ಳುವ ನಗರ ಅನಿಲ ವಿತರಣಾ ಯೋಜನೆಗೆ ಗುರುವಾರ ಸಂಜೆ ಉಡುಪಿಯ ಬೀಡಿನಗುಡ್ಡೆಯಲ್ಲಿರುವ ಮಹಾತ್ಮಾ ಗಾಂಧಿ ಬಯಲು ರಂಗಮಂದಿರದಲ್ಲಿ ಚಾಲನೆ ನೀಡಲಾಯಿತು.
ಪಿಎನ್‌ಜಿಆರ್‌ಬಿ ತನ್ನ 9ನೇ ಬಿಡ್ಡಿಂಗ್‌ನಲ್ಲಿ ದೇಶದ 22 ರಾಜ್ಯಗಳ ಒಟ್ಟು 129 ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ಯೋಜನೆಯನ್ನು ಅನುಸ್ಠಾನಗೊಳಿಸು ತಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗೆ ಚಾಲನೆ ನೀಡಿದರು.
ಉಡುಪಿ ಜಿಲ್ಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಯೋಜನೆಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಉಡುಪಿ ಜಿಲ್ಲೆಗೆ ಯೋಜನೆಯ ಬಿಡ್‌ನ್ನು ಪಡೆದ ಅದಾನಿ ಗ್ಯಾಸ್ ಲಿಮಿಟೆಡ್ ಕಾರ್ಯಕ್ರಮವನ್ನು ಬೀಡಿನಗುಡ್ಡೆ ಬಯಲುರಂಗ ಮಂದಿರದಲ್ಲಿ ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶೋಭಾ, ಯೋಜನೆ ಏಕಕಾಲದಲ್ಲಿ ದೇಶದ 129 ಜಿಲ್ಲೆಗಳಲ್ಲಿ ಪ್ರಾರಂಭಗೊಳ್ಳುತಿದ್ದು, ಇದರಲ್ಲಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಸೇರಿದಂತೆ 13 ಜಿಲ್ಲೆಗಳು ಸೇರಿವೆ ಎಂದರು.
ದೇಶದ ಜನರ ಜೀವನಮಟ್ಟವನ್ನು ಮೇಲಕ್ಕೇರಿಸಲು ಕೇಂದ್ರ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಅನೇಕ ಸುಧಾರಣಾ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಅವುಗಳಲ್ಲಿ ಜನರ ಮನೆಮನೆಗಳಿಗೆ ಶುದ್ಧ ನೈಸರ್ಗಿಕ ಅನಿಲವನ್ನು ಪೈಪ್ ಮೂಲಕ ವಿತರಿಸಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಈ ಯೋಜನೆ ಕುಂದಾಪುರ, ಸಾಲಿಗ್ರಾಮ, ಉಡುಪಿ, ಕಾರ್ಕಳ ಹಾಗೂ ಕಾಪು ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತಿದ್ದು, ಮುಂದಿನ ಎಂಟು ವರ್ಷಗಳಲ್ಲಿ ಇಲ್ಲಿನ ಮನೆಮನೆಗೂ ಪೈಪ್ ಮೂಲಕ ಅಡುಗೆ ಅನಿಲ ಸರಬರಾಜಾಗಲಿದೆ ಎಂದರು. ಇದರಿಂದ ಇನ್ನು ಸಿಲಿಂಡರ್ ಗ್ಯಾಸ್‌ನ ಬಳಕೆ ಇರುವುದಿಲ್ಲ ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಹಾಗೂ ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಮಂಗಳೂರಿನ ಮಾಜಿ ಶಾಸಕ ಯೋಗೇಶ್ ಭಟ್, ಜಿಪಂ ಸದಸ್ಯರಾದ ಶೀಲಾ ಕೆ.ಶೆಟ್ಟಿ, ಗೀತಾಂಜಲಿ ಸುವರ್ಣ, ರೇಶ್ಮಾ ಉದಯಕುಮಾರ್ ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಬಿಜೆಪಿ ನಾಯಕರಾದ ಮಟ್ಟಾರು ರತ್ನಾಕರ ಹೆಗ್ಡೆ, ಸೋಮಶೇಖರ ಭಟ್, ಸುರೇಶ್ ಶೆಟ್ಟಿ ಗುರ್ಮೆ, ಉದಯಕುಮಾರ್ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.
ಅದಾನಿ ಗ್ಯಾಸ್ ಲಿಮಿಟೆಡ್‌ನ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿಜಿಡಿ ಯೋಜನೆ ಯಡಿಯಲ್ಲಿ ಅದಾನಿ ಮುಂದಿನ ಎಂಟು ವರ್ಷಗಳಲ್ಲಿ ಉಡುಪಿ ಜಿಲ್ಲೆಯ 1,10,099 ಪಿಎನ್‌ಜಿ ಸಂಪರ್ಕಗಳನ್ನು ನೀಡಿದರೆ, 11 ಸಿಎನ್‌ಜಿ ಘಟಕಗಳನ್ನು ಸ್ಥಾಪಿಸಲಿದೆ. ಅಲ್ಲದೇ ಒಟ್ಟು 569 ಕಿ.ಮೀ. ಉದ್ದದ ಪೈಪ್‌ಲೈನ್ ನೆಟ್‌ವರ್ಕ್‌ಗಳನ್ನು ಅಳವಡಿಸಲಿದೆ ಎಂದು ವಿವರಿಸಿದರು.
ಎಚ್. ಎನರ್ಜಿ ಸಂಸ್ಥೆಯು ಅನಿಲವನ್ನು ಆಮದು ಮಾಡಿಕೊಂಡು ಮಹಾರಾಷ್ಟ್ರದ ರತ್ನಗಿರಿ ಬಳಿ ಇರುವ ಜಯಗಢ್‌ನಿಂದ ಮಂಗಳೂರು ತನಕ ಪೈಪ್‌ಲೈನ್ ಮೂಲಕ ಅನಿಲವನ್ನು ಕಳುಹಿಸಲಿದೆ. ಇದೀಗ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಉಡುಪಿಯಲ್ಲಿ ರಿಸೀವಿಂಗ್ ಟರ್ಮಿನಲ್ ಒಂದು ಸ್ಥಾಪಿಸಲಾಗುತಿದ್ದು, ಇದರ ಮೂಲಕ ಅದಾನಿ ಗ್ಯಾಸ್ ಸಂಸ್ಥೆಯು ಅನಿಲವನ್ನು ಪೈಪ್‌ಲೈನ್ ಮೂಲಕ ಜಿಲ್ಲೆಯ ಪ್ರತಿ ಮನೆಮನೆಗೂ ತಲುಪಿಸುವ ಕಾರ್ಯ ಮಾಡಲಿದೆ ಎಂದರು.
ಶಿಕ್ಷಕ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.