ಟು-ಸ್ಟ್ರೋಕ್ ಆಟೋಗಳ ಮೇಲಿನ ನಿಷೇಧ ವಾಪಸ್: ವಾಯುಮಾಲಿನ್ಯ ನಿಯಂತ್ರಣ ಕ್ರಮಕ್ಕೆ ಹಿನ್ನೆಡೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.22: ನಗರದಲ್ಲಿರುವ 2 ಸ್ಟ್ರೋಕ್ ಆಟೋಗಳ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆದಿದ್ದು, ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೈಗೊಂಡಿದ್ದ ಕ್ರಮಗಳಿಗೆ ಒಂದು ಹೆಜ್ಜೆ ಹಿನ್ನೆಡೆಯಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯ ಉಂಟು ಮಾಡುತ್ತಿವೆ ಎಂಬ ಕಾರಣದಿಂದಾಗಿ ನಗರದಾದ್ಯಂತ ಟು-ಸ್ಟ್ರೋಕ್ ಆಟೋಗಳಿಗೆ ಈ ವರ್ಷದ ಎಪ್ರಿಲ್ನಿಂದಲೇ ನಿಷೇಧ ಹೇರಲಾಗಿತ್ತು. ಆದರೆ, ಇದಕ್ಕೆ ಸರಿಯಾದ ಸ್ಪಂದನೆ ಸಿಗದೆ, ಎಂದಿನಂತೆ ಕಾರ್ಯಾಚರಣೆ ಮಾಡಲಾಗುತ್ತಿದೆ. ಅದರ ನಡುವೆ ವಿವಿಧ ಸಂಘಟನೆಗಳು ನಿಷೇಧ ಹಿಂಪಡೆಯಬೇಕು ಎಂದು ಸರಕಾರದ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ, ಎಲ್ಪಿಜಿ ಆಧಾರಿತ ಆಟೋಗಳ ಮೇಲಿನ ರದ್ಧತಿಯನ್ನು ಹಿಂಪಡೆಯಲಾಗಿದೆ. ಅಲ್ಲದೆ, 2020 ರ ಮಾರ್ಚ್ವರೆಗೂ ನವೀಕರಣಕ್ಕೆ ಅನುಮತಿ ನೀಡಿ ಇತ್ತೀಚಿಗೆ ಆದೇಶವನ್ನೂ ಹೊರಡಿಸಲಾಗಿದೆ.
20 ಸಾವಿರ ಆಟೋಗಳು: ಬೆಂಗಳೂರು ನಗರದಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ಆಟೋಗಳಿದ್ದು, ಅದರಲ್ಲಿ 20 ಸಾವಿರಕ್ಕೂ ಅಧಿಕ ಟು-ಸ್ಟ್ರೋಕ್ ಆಟೋಗಳಿವೆ. ಅದರಲ್ಲಿ ಡಿಸೇಲ್ನಿಂದ ಎಲ್ಪಿಜಿಗೆ ಹಲವು ಬದಲಾಗಿವೆ ಎನ್ನಲಾಗಿದೆ.
ನಿಷೇಧದ ನಂತರ ಯಾವುದೇ ಆಟೋಗಳಿಗೆ ಅರ್ಹತಾ ಪ್ರಮಾಣಪತ್ರ ನೀಡಿರಲಿಲ್ಲ. ಇದರಿಂದ ಚಾಲಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ನಿರಂತರ ಒತ್ತಾಯದ ಮೇರೆಗೆ 2020ರವರೆಗೆ ನವೀಕರಣಕ್ಕೆ ಅವಕಾಶ ನೀಡಲಾಗಿದೆ.
ಟು-ಸ್ಟ್ರೋಕ್ ಆಟೋಗಳ ನಿಷೇಧದ ಸಂದರ್ಭದಲ್ಲಿ ಎಲ್ಲವನ್ನೂ ಗುಜರಿಗೆ ಹಾಕುವಂತೆ ಸೂಚಿಸಲಾಗಿತ್ತು. ಗುಜರಿಗೆ ಹಾಕಿದ ಆಟೋಗಳಿಗೆ ಸರಕಾರ 30 ಸಾವಿರ ರೂ. ಸಬ್ಸಿಡಿ ನೀಡುವುದಾಗಿ ಘೋಷಿಸಿತ್ತು. ಆದರೆ, ಇದಕ್ಕೆ ಸರಿಯಾದ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಸರಕಾರ ನೀಡುವ ಸಬ್ಸಿಡಿ ಕಡಿಮೆ ಇದೆ. ಅಲ್ಲದೆ, ಆ ಹಣ ಕೈಸೇರಲು ಸಾಕಷ್ಟು ಸಮಯ ಹಿಡಿಯುತ್ತದೆ ಎಂದು ಮಾಲಕರು ಹೇಳಿದ್ದರು.
ಜೀವನ ನಿರ್ವಹಣೆಗಾಗಿ ಇದ್ದ ಆಟೋಗಳನ್ನು ಗುಜರಿಗೆ ಹಾಕಿದರೆ ಕುಟುಂಬದ ನಿರ್ವಹಣೆ ಹೇಗೆ ಸಾಧ್ಯ ಎಂದು ಚಾಲಕರು ಅಭಿಪ್ರಾಯಿಸಿದ್ದು, ಸಬ್ಸಿಡಿಗೆ ಮೀಸಲಿಟ್ಟ 30 ಕೋಟಿ ಹಣ ಬಳಕೆಯಾಗದೆ ಹಣಕಾಸು ಇಲಾಖೆಗೆ ವಾಪಸ್ಸಾಗಿದ್ದು, ನಿಷೇಧವನ್ನೂ ಹಿಂಪಡೆಯಲಾಗಿದೆ.
ಹೊಸ ಆಟೋಗಳ ಬೆಲೆ ಒಂದೂವರೆ ಲಕ್ಷ ರೂ. ಆದರೆ, ಸರಕಾರ ನೀಡುವ ಸಬ್ಸಿಡಿ 30 ಸಾವಿರ ರೂ.ಗಳಾಗಿದೆ. ಈ ಮೊತ್ತವನ್ನು ಹೆಚ್ಚಳ ಮಾಡಲು ಸರಕಾರ ನಿರಾಕರಿಸಿದೆ. ಮತ್ತೊಂದು ಕಡೆ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಕೊಡುವಂತಹ ಯಾವುದೇ ಯೋಜನೆಗಳೂ ಇಲ್ಲ. ಹೀಗಿರುವಾಗ, ಲಕ್ಷ ರೂ. ಹೊಂದಿಸುವುದು ಕಷ್ಟವಾಗುತ್ತದೆ. ಅಲ್ಲಿಯವರೆಗೆ ಕುಟುಂಬ ನಿರ್ವಹಣೆ ಹೇಗೆ ಮಾಡುವುದು? ಹೀಗಾಗಿ, ಆದೇಶ ಹಿಂಪಡೆಯಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ವಿವಿಧ ಆಟೋ ಮಾಲಕರ ಸಂಘಟನೆಗಳ ಪದಾಧಿಕಾರಿಗಳನ್ನು ಒಳಗೊಂಡ ಕೋರ್ ಕಮಿಟಿ ಸದಸ್ಯ ಎಲ್. ಜಯರಾಂ ಸಭೆಯಲ್ಲಿ ಒತ್ತಾಯಿಸಿದ್ದರು.
ಚಾಲಕರ ಪ್ರಶ್ನೆ: ಎಲ್ಪಿಜಿ ಟು-ಸ್ಟ್ರೋಕ್ ಹಾಗೂ 4 ಸ್ಟ್ರೋಕ್ ಆಟೋಗಳಿಗೆ ತುಂಬಾ ವ್ಯತ್ಯಾಸವಿಲ್ಲ. ಟು-ಸ್ಟ್ರೋಕ್ ಆಟೋಗಳು ಹೆಚ್ಚು ಸದ್ದು ಮಾಡುತ್ತದೆ. ಅದನ್ನೇ ಕಾರಣವಾಗಿಟ್ಟುಕೊಂಡು ನಿಷೇಧ ಹೇರುವುದು ಎಷ್ಟು ಸರಿ ಎಂದು ಆಟೋ ಚಾಲಕರು ಪ್ರಶ್ನಿಸಿದ್ದಾರೆ.







