ಉಡುಪಿ: ಶಾಸಕರ ಅಧ್ಯಕ್ಷತೆಯಲ್ಲಿ ನಗರಸಭಾ ಚುನಾಯಿತ ಪ್ರತಿನಿಧಿಗಳ ಸಭೆ

ಉಡುಪಿ, ನ.22: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಮೂರು ತಿಂಗಳು ಕಳೆದರೂ ಇನ್ನೂ ಉಡುಪಿ ನಗರಸಭೆ ಅಸ್ತಿತ್ವಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಆಯ್ಕೆಯಾಗಿರುವ 35 ಮಂದಿ ನಗರಸಭೆಯ ಚುನಾಯಿತ ಸದಸ್ಯರ ಅಹವಾಲು ಆಲಿಸಲು ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಇಂದು ಉಡುಪಿ ನಗರಸಭೆಯ ಸತ್ಯಮೂರ್ತಿ ಸ್ಮಾರಕ ಸಭಾಂಗಣದಲ್ಲಿ ಜನಪ್ರತಿನಿಧಿ ಳ ಹಾಗೂ ಅಧಿಕಾರಿಗಳ ನಡೆಯಿತು.
ಸಭೆಯಲ್ಲಿ ಒಟ್ಟು 36 ಮಂದಿಗೆ ವಾಜಪೇಯಿ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೆಡ್ಕರ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಮಂಜೂರಾತಿ ಪತ್ರ ವಿತರಿಸಲಾಯಿತು. ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಗಳಿಂದ ಲಭ್ಯವಿರುವ 1.5 ಲಕ್ಷ ರೂ. ಹಾಗೂ 1.20ಲಕ್ಷ ರೂ. ಸಹಾಯಧನ ವನ್ನು ಪಡೆಯುವ ಕುರಿತು ಅಧಿಾರಿಗಳು ಮಾಹಿತಿಗಳನ್ನು ನೀಡಿದರು.
ಸಭೆಯಲ್ಲಿ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಗಣರಾಜ್ ಭಟ್ ಉಪಸ್ಥಿತಿಯಲ್ಲಿ ವಿದ್ಯುತ್ ದಾರಿ ದೀಪದ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಸದಸ್ಯರು ತಮ್ಮ ತಮ್ಮ ವಾರ್ಡುಗಳಲ್ಲಿರುವ ದಾರಿದೀಪ ಸಮಸ್ಯೆಯ ಕುರಿತು ದೂರುಗಳನ್ನು ನೀಡಿದರು. ಕುಡ್ಸೆಂಪ್ ಅಧಿಕಾರಿಗಳು ಹಾಜರಿದ್ದು ವಾರಾಹಿ ಯೋಜನೆ ಬಗ್ಗೆ ಚರ್ಚಿಸಿ ದರು. ಯೋಜನೆಯಲ್ಲಿ ಭರತ್ಕಲ್‌ನಿಂದ ವಾರಾಹಿ ನೀರನ್ನು ತರಲು 122.5 ಕೋಟಿ ರೂ.ಗಳ ಯೋಜನೆ ಸಿದ್ಧವಾಗಿದ್ದು, ಟೆಂಡರ್ ಹಂತದಲ್ಲಿದೆ. ಅಮೃತಯೋಜನೆಯಡಿ ಇದನ್ನು ಕೈಗೆತ್ತಿಕೊಳ್ಳಲಾಗುವುದು. ಉಡುಪಿಗೆ ನಿರಂತರ ಕುಡಿಯುವ ನೀರನ್ನು ಒದಗಿಸಲು ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದರು.
ಇದರೊಂದಿಗೆ ಉಡುಪಿಯಲ್ಲಿ ಕುಡಿಯುವ ನೀರಿನ ವಿತರಣಾ ಜಾಲವನ್ನು ವಿಸ್ತರಿಸುವ ಹಾಗೂ ಬಜೆಯಲ್ಲಿರುವ ನೀರು ಶುದ್ಧೀಕರಣ ಘಟಕ (ಡಬ್ಲುಟಿಪಿ)ಯ ಉನ್ನತೀಕರಣ ಯೋಜನೆಯನ್ನು ಸಹ ಕೈಗೆತ್ತಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಉಡುಪಿ ನಗರಸಭೆಯ ಇತರೆ ಸಮಸ್ಯೆಗಳಾದ ನಳ್ಳಿ ನೀರು, ಕಸ ವಿಲೇವಾರಿ, ಪ್ಯಾಚ್ ವರ್ಕ್ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು. ಪರ್ಕಳದಿಂದ ಆದಿ ಉಡುಪಿವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಹಾಗೂ ಭೂಸ್ವಾಧೀನದ ಕುರಿತು ಮಾಹಿತಿಗಳನ್ನು ನೀಡಲಾಯಿತು. ಸಭೆಯಲ್ಲಿದ್ದ ಎಲ್ಲಾ ನಗರಸಭಾ ಸದಸ್ಯರು ತಮ್ಮ ತಮ್ಮ ವಾರ್ಡಿನ ಸಮಸ್ಯೆಗಳನ್ನು ಅಧಿಕಾರಗಳ ಗಮನ್ಕೆ ತಂದರು.
ನಗರಸಭೆ ಪೌರಾಯುಕ್ತ ಆನಂದ್ ಜಿ.ಕಲ್ಲೋಳಿಕರ್, ಸಹಾಯಕ ಕಾರ್ಯ ಪಾಲಕ ಅಭಿಯಂತಕರ ಗಣೇಶ್, ಮ್ಯಾನೇಜರ್ ವೆಂಕಟರಮಣಯ್ಯ, ಕಂದಾಯ ಅಧಿಕಾರಿ ಧನಂಜಯ್ ಸೇರಿದಂ ತೆ ವಿವಿಧ ಅಧಿಕಾರಿಗಳು ಹಾಜರಿದ್ದರು.
ಪೌರಾಯುಕ್ತರು, ಅಧಿಕಾರಿಗಳ ಗೈರಿಗೆ ಸದಸ್ಯರ ಆಕ್ರೋಶ
ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಬೆಳಗ್ಗೆ 10:30ಕ್ಕೆ ಶಾಸಕರು ಕರೆದ ಈ ಸಭೆಯಲ್ಲಿ ನಗರಸಭೆಯ ಆಯುಕ್ತ ಆನಂದ್ ಜಿ.ಕಲ್ಲೋಳಿಕರ್ ಸೇರಿದಂತೆ ಯಾವುದೇ ಹಿರಿಯ ಅಧಿಕಾರಿಗಳು ಉಪಸ್ಥಿತರಿಲ್ಲದೇ ಇದುದು ಶಾಸಕರು ಹಾಗೂ ನಗರಸಭೆಯ ಚುನಾಯಿತ ಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಯಿತು.
ನಗರಸಭೆಯ ಚುನಾಯಿತ ಪ್ರತಿನಿಧಿಗಳು ಇನ್ನು ನಗರಸಭಾ ಸದಸ್ಯರಾಗಿ ಪ್ರತಿಜ್ಞಾವಿಧಿ ಸ್ವೀಕರಿಸದಿರುವ ಹಿನ್ನೆಲೆಯಲ್ಲಿ ಹೀಗೆ ನಗರಸಭೆಯಲ್ಲಿ ಸಭೆ ಕರೆದಿರುವುದು ಸರಿಯಲ್ಲ ಎಂದು ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ತಿಳಿಸಿರುವ ಹಿನ್ನೆಲೆಯಲ್ಲಿ ಪೌರಾಯುಕ್ತರು ಸಭೆಯನ್ನು ಮುಂದೂಡುವಂತೆ ಶಾಸಕರ ಮನೆಗೆ ತೆರಳಿ ವಿನಂತಿಸಿದ್ದು, ಶಾಸಕರ ಹಾಗೂ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
ಜಿಲ್ಲಾಧಿಕಾರಿಗಳ ಕುಮ್ಮಕ್ಕಿನಿಂದಲೇ ಪೌರಾಯುಕ್ತರು ಹಾಗೂ ಇತರ ಅಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲ ಎಂದು ಅವರು ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಜನರು ನಮ್ಮನ್ನು ಆಯ್ಕೆ ಮಾಡಿ ಮೂರು ತಿಂಗಳಾಯಿತು. ನಗರದ ಬೀದಿ ದೀಪ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆಗಳ ಕುರಿತು ಪದೇ ಪದೇ ನಮ್ಮನ್ನು ಪ್ರಶ್ನಿಸುತ್ತಾರೆ. ನಮಗೆ ಉತ್ತರ ಕೊಡಲೂ ಸಾಧ್ಯವಾಗುತ್ತಿಲ್ಲ. ಇಲ್ಲಿ ನೋಡಿದರೆ ಅಧಿಕಾರಿಗಳೂ ನಮ್ಮ ಸಮಸ್ಯೆ ಕೇಳುತ್ತಿಲ್ಲ ಎಂದವರು ದೂರಿದರು.
ಶಾಸಕ ರಘುಪತಿ ಭಟ್ ಮಾತನಾಡಿ, ಶಾಸಕನಾಗಿ ನನಗೆ ನನ್ನದೇ ಆದ ಕೆಲ ಜವಾಬ್ದಾರಿಗಳಿವೆ. ನಗರಸಭೆ ಇನ್ನೂ ಅಸ್ತಿತ್ವಕ್ಕೆ ಬಾರದಿರುವ ಕಾರಣ, ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಅವರ ವಾರ್ಡುಗಳನ್ನು ಸಮಸ್ಯೆಗಳನ್ನು ಆಲಿಸಿ ಅದನ್ನು ಅಧಿಕಾರಿಗಳ ಮೂಲಕ ಬಗೆಹರಿಸುವುದು ನನ್ನ ಉದ್ದೇಶವಾಗಿತ್ತು ಎಂದರು.
ಆದರೆ ಈಗ ನಾನು ಸಭೆ ಕರೆದಿರುವುದೇ ತಪ್ಪು ಎಂಬ ಧೋರಣೆಯನ್ನು ಅಧಿಕಾರಿಗಳು ತೋರುತಿದ್ದಾರೆ. ಹಾಗಾದರೆ ಶಾಸಕನಾಗಿ ನನಗೆ ಕೆಲವು ಹಕ್ಕುಗಳಿಲ್ಲವೇ. ನಾನು ಕರೆದ ಸಭೆ ಕಾನೂನಿಗೆ ವಿರುದ್ಧವಾದರೆ ಹಾಗೆಂದು ಪೌರಾಯುಕ್ತರು ನನಗೆ ಲಿಖಿತವಾಗಿ ನೀಡಲಿ. ನಾನು ನನ್ನ ವೇದಿಕೆಯಲ್ಲಿ, ವಿಧಾನಸಭೆಯಲ್ಲಿ ನನ್ನ ಹಕ್ಕುಚ್ಯುತಿಯಾದ ಬಗ್ಗೆ ವಿಚಾರಿಸುತ್ತೇನೆ ಎಂದು ಗುಡುಗಿದರು.
ಪೌರಾಯುಕ್ತರು ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದು 10 ನಿಮಿಷಗಳಲ್ಲಿ ಬರುತ್ತಾರೆ ಎಂದು ನಗರಸಭಾ ಅಧಿಕಾರಿಗಳು ತಿಳಿಸಿದಾಗ, ಅವರ ಆಗಮನಕ್ಕಾಗಿ ಕಾಯಲಾಯಿತು. ಆದರೆ ಅಪರಾಹ್ನ 1 ಗಂಟೆಯಾದರೂ ಅವರು ಬಾರದಿದ್ದಾಗ ಶಾಸಕರೊಂದಿಗೆ, ಸದಸ್ಯರು ಸಿಟ್ಟಿಗೆದ್ದರು. ನನಗೆ ಲಿಖಿತವಾಗಿ ಏನೆಂದು ತಿಳಿಸಿ, ಇಲ್ಲದಿದ್ದರೆ ನಾನು ನಗರಸಭೆಯ ಎದುರು ಧರಣಿ ಕೂರುತ್ತೇನೆ ಎಂದು ಶಾಸಕರು ಹೇಳಿದಾಗ, ನಾವು ನಿಮ್ಮಿಂದಿಗೆ ಧರಣಿಯಲ್ಲಿ ಭಾಗವಹಿಸುತ್ತೇವೆ ಎಂದು ಬಿಜೆಪಿ ಸದಸ್ಯರು ನುಡಿದರು.
ಸದಸ್ಯರೊಳಗೆ ಈ ಬಗ್ಗೆ ಚರ್ಚೆಗಳು ನಡೆಯುತಿದ್ದಾಗ ಪೌರಾಯುಕ್ತರು, ಅದಿಕಾರಿಗಳೊಂದಿಗೆ ಸಭೆಗೆ ಆಗಮಿಸಿದ್ದು, ಎಲ್ಲರ ಆಕ್ರೋಶವನ್ನು ತಣ್ಣಗಾಗಿಸಿತು.