ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ: ಆರೋಪಿ ಅಸೀಂ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು, ನ.22: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಪ್ರಕರಣದ 5ನೆ ಆರೋಪಿ ಅಸೀಂ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ಪ್ರಕರಣದಿಂದ ತನ್ನನ್ನು ಆರೋಪಮುಕ್ತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಸೀಂ ಷರೀಫ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಕೆ.ಎನ್.ಸುಧೀಂದ್ರರಾವ್ ಅವರಿದ್ದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತ್ತು. ಸದ್ಯ ಧಾರವಾಡ ಪೀಠದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ಸುಧೀಂಧ್ರರಾವ್, ವೀಡಿಯೋ ಕಾನ್ಫರೆನ್ಸ್ ಮೂಲಕ ಗುರುವಾರ ತೀರ್ಪು ಪ್ರಕಟಿಸಿದ್ದು, ಆರೋಪಿಯ ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿದಾರರ ಆಕ್ಷೇಪಣೆ ಏನು: ಯಾವುದೇ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕಾದರೆ ಆ ಪ್ರಕರಣವು ಅಕ್ರಮ ಕೂಟ ಕಾಯ್ದೆ-1967ರ ಅನುಸಾರ ಅದರಲ್ಲಿನ ಷೆಡ್ಯೂಲ್ಡ್ (ಪಟ್ಟಿ ಮಾಡಲಾಗಿರುವ) ಅಪರಾಧದ ಸ್ವರೂಪ ಹೊಂದಿರಬೇಕು. ಆದರೆ ಇದೊಂದು ಕೊಲೆ ಪ್ರಕರಣವಾಗಿದ್ದು, ಅನಗತ್ಯವಾಗಿ ಭಯೋತ್ಪಾದಕತೆಯ ಬಣ್ಣ ಹಚ್ಚಲಾಗಿದೆ. ಕೊಲೆ ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ಘಟನೆ ನಡೆದ ಸ್ಥಳದಲ್ಲಿ ಆರೋಪಿ ಇರಲಿಲ್ಲ. ಅರ್ಜಿದಾರರಿಗೆ ಪಿಎಫ್ಐ ಸಂಘಟನೆಯ ನಂಟಿದೆ ಎಂದಾದರೂ, ಅದು ನಿಷೇಧಿತ ಸಂಘಟನೆಯಲ್ಲ. ಇದೊಂದು ರಾಜಕೀಯ ಪ್ರೇರಿತ ಪ್ರಕರಣವಾಗಿದೆ. ಹೀಗಾಗಿ ಆರೋಪ ಕೈಬಿಡಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ವಿಚಾರಣೆ ವೇಳೆ ವಾದ ಮಂಡಿಸಿದ್ದ ಎನ್‌ಐಎ ಪರ ವಕೀಲ ಪಿ. ಪ್ರಸನ್ನ ಕುಮಾರ್, ಹತ್ಯೆಯಾದ ರುದ್ರೇಶ್ ಹಾಗೂ ಆರೋಪಿಗಳ ನಡುವೆ ಯಾವುದೇ ಪರಿಚಯ ಅಥವಾ ದ್ವೇಷವಿಲ್ಲ. ಎಲ್ಲ ಆರೋಪಿಗಳೂ ಪಿಎಫ್ಐ ಕಾರ್ಯಕರ್ತರಾಗಿದ್ದು, ಆರೆಸ್ಸೆಸ್ ಕಾರ್ಯಕರ್ತರನ್ನು ಗುರಿಯಾಗಿಸಿ ಕೃತ್ಯವೆಸಗಿದ್ದಾರೆ ಎಂದು ಪೀಠಕ್ಕೆ ತಿಳಿಸಿದ್ದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿರುವ ನ್ಯಾಯಾಲಯ, ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಶಿವಾಜಿನಗರದಲ್ಲಿ 2016ರ ಅ.16ರಂದು ನಗರದ ಕಾಮರಾಜ ರಸ್ತೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕಮರ್ಷಿಯಲ್ ಸ್ಟ್ರೀಟ್ ಠಾಣಾ ಪೊಲೀಸರು ತನಿಖೆ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಅಸೀಂ ಶರೀಫ್ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದರು. ಈ ಮಧ್ಯೆ ಕೇಂದ್ರ ಸರಕಾರ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಿ ಆದೇಶಿಸಿತ್ತು.







