ನಾಗರಿಕರ ಮತದಾನದ ಹಕ್ಕನ್ನು ಖಾತರಿಪಡಿಸಲು ಪಿಎಫ್‌ಐ ಆಗ್ರಹ
'ಮತದಾರರ ಪಟ್ಟಿಗೆ ಸೇರ್ಪಡೆಯ ಅರ್ಜಿಗಳ ತಿರಸ್ಕಾರ'
ಮಂಗಳೂರು, ನ.22: ರಾಜ್ಯದಲ್ಲಿ 2017-18ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಸಲ್ಲಿಸಲಾದ 2.8 ಲಕ್ಷ ಅರ್ಜಿಗಳ ಪೈಕಿ ಶೇ.62ರಷ್ಟು ಅರ್ಜಿಗಳು ತಿರಸ್ಕೃತಗೊಂಡಿರುವುದು ಸುಮಾರು ಶೇ.20ರಷ್ಟು ಅರ್ಜಿಗಳನ್ನು ವಿದೇಶಿ ಪೌರರೆಂದು ಆರೋಪಿಸಿ ಮತ್ತು ಶೇ.24ರಷ್ಟು ಅರ್ಜಿಗಳನ್ನು ಅನಿರ್ದಿಷ್ಟ ಕಾರಣ ಗಳಿಗಾಗಿ ಕೈಬಿಡಲಾಗಿದೆ ಎಂದು ಅಧ್ಯಯನವೊಂದರಲ್ಲಿ ಬಹಿರಂಗಗೊಂಡಿರುವ ವಿಚಾರವು ತೀರಾ ಆಘಾತಕಾರಿಯಾಗಿದೆ ಎಂದು ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಹೇಳಿದ್ದಾರೆ.
ದೊಡ್ಡಮಟ್ಟದಲ್ಲಿ ತಿರಸ್ಕೃತಗೊಂಡಿರುವ ಅರ್ಜಿದಾರರಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದು ಮುಸ್ಲಿಮರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡುವ ದುರುದ್ದೇಶಪೂರಿತ ಪ್ರಯತ್ನದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅರ್ಜಿದಾರ ಕುಟುಂಬಗಳಿಗೆ ತಮ್ಮ ಅರ್ಜಿ ತಿರಸ್ಕರಿಸಲ್ಪಟ್ಟ ಕುರಿತಾಗಲೀ, ಯಾವ ಕಾರಣಕ್ಕಾಗಿ ಅರ್ಜಿ ತಿರಸ್ಕರಿಸಲಾಗಿದೆ ಎಂಬ ಮಾಹಿತಿಯಿಲ್ಲ ಮತ್ತು ಅನರ್ಹತೆಯನ್ನು ಪ್ರಶ್ನಿಸಲು ಅವರಿಗೆ ಅವಕಾಶವನ್ನೇ ನೀಡಲಾಗಿಲ್ಲ. ಆಧಾರ್, ವಿದ್ಯುತ್ ಬಿಲ್, ಶಾಲಾ ಪ್ರಮಾಣ ಪತ್ರಗಳಿದ್ದ ಹೊರತಾಗಿಯೂ ವಿದೇಶೀ ಪ್ರಜೆಗಳೆಂಬ ಶಂಕೆಯಲ್ಲಿ ಅವರನ್ನು ಮತದಾರರ ಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗಿಲ್ಲ ಎಂಬ ಮಾಹಿತಿಯನ್ನೂ ಸಂಶೋಧನೆ ಬಹಿರಂಗಪಡಿಸಿದೆ. ಅಗತ್ಯ ದಾಖಲೆಗಳಿದ್ದು ಕೂಡ ಅವರಿಗೆ ವಿದೇಶಿ ಪ್ರಜೆಗಳೆಂದು ಸುಳ್ಳು ಹಣೆಪಟ್ಟಿ ಕಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಈ ಹಿಂದೆ ಅಸ್ಸಾಂನಲ್ಲಿಯೂ 40 ಲಕ್ಷ ಮಂದಿ ಬಂಗಾಳಿ ಭಾಷಿಕರನ್ನು ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಕರಡಿನಿಂದ ಹೊರಗಿಡಲಾಗಿತ್ತು. ಗಮನಾರ್ಹವೆಂದರೆ, ಕರಡಿನಿಂದ ಹೊರಗಿಡಲಾಗಿದ್ದವರ ಪೈಕಿ ದೊಡ್ಡಪಾಲು ಮುಸ್ಲಿಮರದ್ದಾಗಿತ್ತು. ಈ ಬೆಳವಣಿಗೆಯ ನಂತರ ಕುತ್ಸಿತ ಶಕ್ತಿಗಳು ಅಗತ್ಯ ದಾಖಲೆಗಳನ್ನು ಹೊಂದಿಯೂ ಎನ್‌ಆರ್‌ಸಿಯಲ್ಲಿ ಹೆಸರು ಕೈಬಿಟ್ಟುಹೋಗಿರುವವರನ್ನು ಬಾಂಗ್ಲಾದೇಶಿ ನುಸುಳುಕೋರರು ಎಂದು ವ್ಯಾಪಕ ಅಪಪ್ರಚಾರದಲ್ಲಿ ತೊಡಗಿ ರಾಜಕೀಯ ಲಾಭ ಪಡೆಯಲು ಹವಣಿಸಿದ್ದವು. ಇದೀಗ ರಾಜ್ಯದಲ್ಲೂ ಅಗತ್ಯ ದಾಖಲೆಗಳನ್ನು ಸಲ್ಲಿಸಿರುವ ಹೊರತಾಗಿಯೂ ವಿದೇಶಿ ಪೌರರೆಂದು ಜರೆದು ನಾಗರಿಕರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಸಂಶಯದ ವಾತಾವರಣವನ್ನು ಸೃಷ್ಟಿಸಿದೆ.
ಹಾಗಾಗಿ ಆಡಳಿತ ವ್ಯವಸ್ಥೆಯು ಕೂಡಲೇ ಮಧ್ಯ ಪ್ರವೇಶಿಸಿ 1960 ಮತದಾರರ ನಿಯಮಾವಳಿಗಳ ನೋಂದಣಿಯಡಿ ಒದಗಿಸಲಾದ ವ್ಯಾಪಕ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿ ನಾಗರಿಕರ ಮತದಾನದ ಹಕ್ಕನ್ನು ಖಾತರಿಪಡಿಸಬೇಕು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸರಕಾರ ಮತ್ತು ಚುನಾವಣಾ ಅಧಿಕಾರಿಗಳೊಂದಿಗೆ ಮುಹಮ್ಮದ್ ಶಾಕಿಬ್ ಆಗ್ರಹಿಸಿದ್ದಾರೆ.