ಸಾಲಮನ್ನಾಕ್ಕೆ ಆಗ್ರಹ: ಮಹಾರಾಷ್ಟ್ರ ರೈತರಿಂದ ಭಾರೀ ಪ್ರತಿಭಟನೆ,ಮಣಿದ ಮುಖ್ಯಮಂತ್ರಿ
ಮುಂಬೈ,ನ.22: ರಾಜ್ಯದ ರೈತ ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದ 7,000ಕ್ಕೂ ಅಧಿಕ ಜನರು ಗುರುವಾರ ಇಲ್ಲಿಯ ಆಝಾದ್ ಮೈದಾನದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿ ಸಾಲ ಮನ್ನಾ,ಬರ ಪರಿಹಾರ,ಬೆಳೆಗಳಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ,ಅರಣ್ಯ ಹಕ್ಕುಗಳ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಇತ್ಯಾದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ತಮ್ಮ ಬೇಡಿಕೆಗಳು ಈಡೇರುವವರೆಗೂ ಮೈದಾನದಿಂದ ಕದಲುವುದಿಲ್ಲವೆಂಬ ರೈತರ ಹಟಕ್ಕೆ ಕೊನೆಗೂ ಮಣಿದ ಮುಖ್ಯಮತ್ರಿ ದೇವೇಂದ್ರ ಫಡ್ನವೀಸ್ ಅವರು ಸಂಜೆ ವಿಧಾನ ಭವನದಲ್ಲಿ ರೈತ ನಾಯಕರನ್ನು ಭೇಟಿಯಾಗಿ ಹೆಚ್ಚಿನ ಬೇಡಿಕೆಗಳ ಈಡೇರಿಕೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಲಿಖಿತ ಭರವಸೆಯನ್ನು ನೀಡಿದರು.
ಇದು ಈ ವರ್ಷ ರಾಜ್ಯದಲ್ಲಿ ರೈತರ ಮೂರನೇ ಬೃಹತ್ ಪ್ರತಿಭಟನೆಯಾಗಿದ್ದು, ಲೋಕ ಸಂಘರ್ಷ ಮೋರ್ಚಾದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಜೆಡಿಎಸ್,ಆಪ್ ಮತ್ತು ಶಿವಸೇನೆ ಬೆಂಬಲಿಸಿದ್ದವು.
ಥಾಣೆಯಿಂದ ಮಂಗಳವಾರ ಜಾಥಾ ಆರಂಭಿಸಿದ್ದ ರೈತರು ಗುರುವಾರ ಅಪರಾಹ್ನ ಆಝಾದ್ ಮೈದಾನವನ್ನು ತಲುಪಿದ್ದರು. ಸ್ವರಾಜ್ ಅಭಿಯಾನದ ನಾಯಕ ಯೋಗೇಂದ್ರ ಯಾದವ ಮತ್ತು ಮಾಗ್ಸೆಸೆ ಪ್ರಶಸಿ ್ತಪುರಸ್ಕೃತ ರಾಜೇಂದ್ರ ಸಿಂಗ್ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕರ್ತರು ಪ್ರತಿಭಟನಾಕಾರರೊಂದಿಗೆ ಕೈಜೋಡಿಸಿದ್ದರು.
ರೈತರ ಜಾಥಾದ ಹಿನ್ನೆಲೆಯಲ್ಲಿ ಬೆಳಿಗ್ಗೆ 10ಗಂಟೆಯವರೆಗೆ ಜಾಥಾ ಸಾಗುವ ಕೆಲವು ರಸ್ತೆಗಳನ್ನು ಬಳಸದಂತೆ ಪೊಲೀಸರು ವಾಹನಗಳಿಗೆ ಸೂಚಿಸಿದ್ದರು, ಆಝಾದ್ ಮೈದಾನದ ಬಳಿಯೂ ಸಂಚಾರಕ್ಕೆ ಕೆಲವು ಕಾಲ ವ್ಯತ್ಯಯವುಂಟಾಗಿತ್ತು.
ಬರ ಪರಿಹಾರ ಪ್ರತಿ ಎಕರೆ ನೀರಾವರಿರಹಿತ ಭೂಮಿಗೆ 50,000 ರೂ. ಮತ್ತು ನೀರಾವರಿ ಭೂಮಿಗೆ ಒಂದು ಲ.ರೂ.,ಯಾವುದೇ ಷರತ್ತುಗಳಿಲ್ಲದೆ ಸಂಪೂರ್ಣ ಕೃಷಿ ಸಾಲ ಮನ್ನಾ,ಕನಿಷ್ಠ ಬೆಂಬಲ ಬೆಲೆ ಹೆಚ್ಚಳ,ಬುಡಕಟ್ಟು ಜನಾಂಗಗಳಿಗೆ ಅರಣ್ಯ ಹಕ್ಕುಗಳ ವರ್ಗಾವಣೆ,ಬುಡಕಟ್ಟು ಯುವಕರಿಗೆ ಉದ್ಯೋಗ,ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳ ಅನುಷ್ಠಾನ ಇತ್ಯಾದಿ ಬೇಡಿಕೆಗಳನ್ನು ಪ್ರತಿಭಟನಾಕಾರರು ಮಂಡಿಸಿದ್ದಾರೆ.
ಪಂಜಾಬ್ ಮತ್ತು ಕರ್ನಾಟಕಗಳಲ್ಲಿಯೂ ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.