ರೋಗ ಬಾರದಂತೆ ಮುನ್ನೆಚ್ಚರಿಕೆ ವೈದ್ಯರ ಕರ್ತವ್ಯ- ಡಾ. ಗಣೇಶ್ ಪ್ರಸಾದ್ ಮುದ್ರಾಜೆ
ಪುತ್ತೂರಿನಲ್ಲಿ ಮಧುಮೇಹ ಜಾಗೃತಿ ಜಾಥಾ, ಮಾಹಿತಿ ಕಾರ್ಯಾಗಾರ

ಪುತ್ತೂರು, ನ. 22: ವೈದ್ಯರು ಕೇವಲ ರೋಗಿಗಳಿಗೆ ಚಿಕಿತ್ಸೆ ಕೊಡುವುದು ಮಾತ್ರವಲ್ಲದೇ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಜಾಗೃತಿ ಮೂಡಿಸುವುದು ವೈದ್ಯರ ಕರ್ತವ್ಯವಾಗಿದೆ. ಜಾಥಾದ ಮೂಲಕ ಜನರಿಗೆ ಜಾಗೃತಿ ಮೂಡಿಸುವುದು ಉತ್ತಮ ವಿಚಾರ ಎಂದು ಪುತ್ತೂರು ಐ.ಎಂ.ಎ ಅಧ್ಯಕ್ಷರಾದ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಹೇಳಿದರು.
ಅವರು ಪುತ್ತೂರಿನ ಮಧುಮೇಹ ತಜ್ಞ ಡಾ. ನಝೀರ್ ಅಹಮದ್ ಅವರ ನೇತೃತ್ವದಲ್ಲಿ ಭಾರತೀಯ ವೈದ್ಯಕೀಯ ಸಂಘ, ಹಾಸ್ಪಿಟಲ್ ಅಸೋಸಿಯೇಶನ್, ಪುತ್ತೂರು ಡಾಕ್ಟರ್ಸ್ ಫಾರಂ, ಇಂಡಿಯನ್ ರೆಡ್‍ಕ್ರಾನ್ ಸೊಸೈಟಿ, ರೋಟರಿ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಪುತ್ತೂರಿನಲ್ಲಿ ನಡೆದ ಕಾಲ್ನಡಿ ಜಾಥಾ ಹಾಗೂ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವತ: ಡಯಾಬಿಟೀಸ್ ಆಗಿರುವ ಮಂಗಳೂರಿನ ಎಂ.ಬಿ.ಬಿಎಸ್ ವಿದ್ಯಾರ್ಥಿ ವಿಷ್ಣುಕೀರ್ತಿ ಎಂಬವರು ಸಭೆಯಲ್ಲಿ ತನ್ನ ಡಯಾಬಿಟಿಸ್ ಅನುಭವನ್ನು ಹಂಚಿಹೊಳ್ಳುತ್ತಾ ಮಧುಮೇಹ ನಿರ್ವಹಣೆ ಒಂದು ಕಲೆ. ಅದರಲ್ಲಿ ನಾವು ಹಲವಾರು ಕ್ಲಿಷ್ಟಕರ ಸನ್ನಿವೇಶ ಎದುರಿಸಬೇಕಾಗಿ ಬಂದರೂ ಒಬ್ಬ ಉತ್ತಮ ವೈದ್ಯರ ಮಾರ್ಗದರ್ಶನ ಹಾಗೂ ಶಿಸ್ತುಬದ್ದವಾದ ಆಹಾರ ಕ್ರಮದಿಂದ ಸಕ್ಕರೆ ಅಂಶವನ್ನು ಸಂಪೂರ್ಣ ನಿಯಂತ್ರಣದಲ್ಲಿಟ್ಟು ಯಶಸ್ವೀ ಜೀವನವನ್ನು ನಡೆಸಬಹುದು ಎಂದು ತಿಳಿಸಿದರು.
ಶಿಬಿರದ ಆಯೋಜಕ ಡಾ. ನಝೀರ್ ಅಹಮ್ಮದ್ ಅವರು ಮಧುಮೇಹದ ಬಗ್ಗೆ ಮಾಹಿತಿ ನೀಡಿ, ಮಧುಮೇಹದಲ್ಲಿರುವ ಹಲವು ಬಗೆಗಳು ಮತ್ತು ಅದನ್ನು ಪತ್ತೆಹಚ್ಚುವ ವಿಧಾನಗಳ ಬಗ್ಗ ವಿವರಿಸಿದರು. ಪ್ರತಿಯೊಬ್ಬ ರೋಗಿಯನ್ನು ಆರಂಭಿಕ ಹಂತದಲ್ಲಿ ನಿಖರವಾದ ಪರೀಕ್ಷೆಗಳಿಂದ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಆರಂಭಿಸುವ ಬಗ್ಗೆ ವಿವರಿಸಿದರು. ಡಯಾಬಿಟಿಸ್ ಚಿಕಿತ್ಸೆಯಲ್ಲಿ ಔಷಧಿಗಿಂತಲೂ ಮುಖ್ಯವಾಗಿ ರೋಗದ ಬಗ್ಗೆ, ಆಹಾರ ಪತ್ಯೆ, ವ್ಯಾಯಾಮ, ತಮ್ಮ ಸಕ್ಕರೆ ಅಂಶವನ್ನು ಸ್ವತ: ತಿಳಿದುಕೊಳ್ಳುವುದು ಕಾಲಕಾಲಕ್ಕೆ ನಡೆಸಬೇಕಾದ ಪರೀಕ್ಷೆಗಳು, ಪಾದಗಳ ಸುರಕ್ಷತೆ, ಅನಿಯಂತ್ರಿತ ಸಕ್ಕರೆಯಿಂದ ದೇಹಕ್ಕಾ ಗುವ ಹಾನಿಯ ಬಗ್ಗೆ ಮಾಹಿತಿ ನೀಡಿದರು.
ಡಾಕ್ಟರ್ಸ್ ಫಾರಂ ಅಧ್ಯಕ್ಷ ಡಾ. ಅವಿನಾಶ್ ಕಲ್ಲುರಾಯ, ಹಾಸ್ಪಿಟಲ್ ಅಸೋಶಿಯೇಷನ್ ಸದಸ್ಯ ಡಾ. ಜೋಶಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್, ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಅಧ್ಯಕ್ಷ ಆಸ್ಕರ್ ಆನಂದ್, ಡಾ. ಗೋವಿಂದ ರಾಜ್, ಡಾ. ಕೃಷ್ಣ ಪ್ರಸಾದ್, ಡಾ. ಅನಸ್, ಡಾ. ಸಚಿನ್ ಮನೋಹರ್, ಡಾ. ಗಾಯತ್ರಿ, ಡಾ. ರಾಘವೇಂದ್ರ, ಪುತ್ತೂರು ನಗರಸಭೆ ಸದಸ್ಯೆ ವಿದ್ಯಾ ಗೌರಿ, ಮಕ್ಕಳ ತಜ್ಷ ಡಾ. ರಾಜಶೇಖರ್ ಹೊಸಮನಿ, ಪುತ್ತೂರು ಬೀಡಿ ಕಾರ್ಮಿಕರ ಚಿಕಿತ್ಸಾಲಯದ ವೈದ್ಯಾಧಿಕಾರಿ, ಡಾ. ಅಶೂರಾ ನಝೀರ್ , ಎಂ.ಜಿ. ರಫೀಕ್, ಎ.ಜೆ. ರೈ, ರಾಮಕೃಷ್ಣ, ಕ್ಸೇವಿಯರ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಭಾಗವಹಿಸಿದವರಿಗೆ ವಿವಿಧ ಮುಧುಮೇಹ ಚಿಕಿತ್ಸೆಗಳ ಪ್ರಾತ್ಯಕ್ಷಿಕೆ ನೀಡಲಾಯಿತು. ಸುಮಾರು 80 ಮಂದಿಗೆ ಶಿಬಿರದಲ್ಲಿ ವೈದ್ಯಕೀಯ ಸಲಹೆ ನೀಡಲಾಯಿತು. ಮಧುಮೇಹಿಗಳಿಗೆ ಆಹಾರ ಪತ್ಯದ ತಿಳುವಳಿಕೆ ಮೂಡಿಸುವ ಸಲುವಾಗಿ ವಿಶೇಷ ಖಾದ್ಯಗಳ ಉಪಹಾರವನ್ನು ಆಯೋಜಿಸಲಾಗಿತ್ತು. ಪುತ್ತೂರಿನ ವಿವಿಧ ಆಸ್ಪತ್ರೆ ವೈದ್ಯರುಗಳು, ಸಿಬ್ಬಂದಿಗಳು ಶಿಬಿರದಲ್ಲಿ ಸಹಕರಿಸಿದರು.