ಹನೂರು: ಚೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ಹನೂರು,ನ.22: ತಾಲೂಕಿನ ಹಲವು ಗ್ರಾಮಗಳ ರೈತರ ಜಮೀನುಗಳಿಗೆ ಟಿಸಿ ಅಳವಡಿಸಲು ಚೆಸ್ಕಾಂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಗುರುವಾರ ಚೆಸ್ಕಾಂ ಕಚೇರಿಗೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಪಧಾದಿಕಾರಿಗಳು ಕೆಲ ಕಾಲ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಕರ್ನಾಟಕ ರೈತಸಂಘ ಹಾಗೂ ಹಸಿರು ಸೇನೆ ಪಧಾದಿಕಾರಿಗಳು ಮತ್ತು ವಿವಿಧ ಗ್ರಾಮದ ರೈತ ಮುಖಂಡರು ಚೆಸ್ಕಾಂ ಕಚೇರಿಯ ಮುಂದೆ ಜಮಾಯಿಸಿದರು. ಈ ಸಂದರ್ಭ ಚೆಸ್ಕಾಂ ಕಚೇರಿಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಪ್ರತಿಭಟನಾಕಾರರು ಕಚೇರಿಗೆ ಬೀಗ ಜಡಿದು ಕಚೇರಿಯ ಮುಂದೆ ಕೆಲಕಾಲ ಧರಣಿ ಕುಳಿತು ಸರ್ಕಾರ ಹಾಗೂ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ನಂತರ ಸ್ಥಳಕ್ಕೆ ಆಗಮಿಸಿದ ಎಇ ರಂಗಸ್ವಾಮಿ ಪ್ರತಿಭಟನಾಕಾರರ ಮನವೂಲಿಸಿ ಎಸ್‍ಇ ಇಇ ಬಳಿ ದೂರವಾಣಿ ಮುಖಾಂತರ ಪ್ರತಿಭಟನಕಾರರ ಸಮಸ್ಯೆಗಳ ಸಂಬಂಧ ಮಾತನಾಡಿ ಒಂದು ವಾರದೊಳಗೆ ಎಲ್ಲಾ ಗ್ರಾಮಗಳಿಗೆ ಟಿಸಿ ಆಳವಡಿಕೆ ಸೇರಿದಂತೆ ರೈತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೂನ್ನೂರು ಪ್ರಕಾಶ್, ಕಾರ್ಯದರ್ಶಿ ಹನೂರು ಬಸವಣ್ಣ, ಜಿಲ್ಲಾ ಖಂಜಾಚಿ ಅಂಬಳೆ ಶಿವಕುಮಾರ್, ಹನೂರು ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ಕಾರ್ಯದರ್ಶಿ ಶಾಂತಕುಮಾರ್ ಸೇರಿದಂತೆ ರೈತ ಮುಖಂಡರಾದ ಆರೋಗ್ಯರಾಜ್, ಮಾದಯ್ಯತಂಬಡಿ, ಸಂತೋಷ್ ಇನ್ನಿತರರು ಹಾಜರಿದ್ದರು.







