ಭೋಪಾಲ್ ಗ್ಯಾಸ್ ದುರಂತ ಸಂತ್ರಸ್ತರ ಕಲ್ಯಾಣ ನಿಧಿಯನ್ನು ದುರ್ಬಳಕೆ ಮಾಡಿದ ಬಿಜೆಪಿ ಸಚಿವ: ಆರೋಪ

ಭೋಪಾಲ್, ನ.22: ವಿಶ್ವದ ಅತ್ಯಂತ ಭೀಕರ ಕೈಗಾರಿಕಾ ದುರಂತ ಎಂದೆನಿಸಿರುವ ಯೂನಿಯನ್ ಕಾರ್ಬೈಡ್ ಭೋಪಾಲ್ ಗ್ಯಾಸ್ ದುರಂತದಲ್ಲಿ ಬದುಕುಳಿದವರ ಪುನರ್ವಸತಿ ಕಾರ್ಯಕ್ಕಾಗಿ ಮೀಸಲಿರಿಸಿದ ನಿಧಿಯನ್ನು ಮಧ್ಯಪ್ರದೇಶದ ಬಿಜೆಪಿ ಸಚಿವ ವಿಶ್ವಾಸ್ ಸಾರಂಗ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಭೋಪಾಲ್ ಗ್ಯಾಸ್ ದುರಂತದಲ್ಲಿ ಬದುಕುಳಿದವರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಎನ್‌ಜಿಒ ಸಂಸ್ಥೆಗಳ ಸಂಘಟನೆಯ ಸದಸ್ಯರು ಪತ್ರಿಕಾಗೋಷ್ಟಿಯಲ್ಲಿ ದಾಖಲೆ ಸಹಿತ ಮಾಹಿತಿ ನೀಡಿದರು.
ಮಧ್ಯಪ್ರದೇಶ ಸರಕಾರದ ಭೋಪಾಲ್ ಗ್ಯಾಸ್ ದುರಂತ ಪರಿಹಾರ ಮತ್ತು ಪುನರ್ವಸತಿ ಇಲಾಖೆಯಿಂದ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯಡಿ ಪಡೆಯಲಾದ ಮಾಹಿತಿಯ ಪ್ರಕಾರ, ದುರಂತದಲ್ಲಿ ಬದುಕುಳಿದವರಿಗೆ ಹಾಗೂ ಅವರ ಮಕ್ಕಳಿಗೆ ಉದ್ಯೋಗ ಒದಗಿಸಲು ಮೀಸಲಾಗಿಟ್ಟಿದ್ದ ನಿಧಿಯ ಶೇ.60ರಷ್ಟು ಮೊತ್ತದ ಹಣವನ್ನು ಚರಂಡಿ, ರಸ್ತೆ, ಪಾರ್ಕ್ ನಿರ್ಮಿಸಲು ಬಳಸಲಾಗಿದೆ. ಇದಲ್ಲದೆ, ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯ ವ್ಯಾಪ್ತಿಯ ನಿವಾಸಿಗಳಿಗೆ ಮನೆ ನಿರ್ಮಿಸಲು ಮೀಸಲಿರಿಸಿದ ನಿಧಿಯ ಮೂರನೇ ಒಂದರಷ್ಟು ಮೊತ್ತವನ್ನೂ ಚರಂಡಿ, ರಸ್ತೆ, ಪಾರ್ಕ್ ನಿರ್ಮಿಸಲು ಬಳಸಲಾಗಿದೆ ಎಂದವರು ತಿಳಿಸಿದ್ದಾರೆ. ಗ್ಯಾಸ್ ದುರಂತದಲ್ಲಿ ಬದುಕುಳಿದ 1 ಲಕ್ಷ ಮಂದಿಗೆ ಹಾಗೂ ಅವರ ಮಕ್ಕಳಿಗೆ ಉದ್ಯೋಗ ಒದಗಿಸಲು 2010ರಲ್ಲಿ 104 ಕೋಟಿ ರೂ. ನಿಧಿ ಇರಿಸಲಾಗಿತ್ತು. ಆದರೆ ಕಳೆದ 8 ವರ್ಷದಲ್ಲಿ ಒಬ್ಬರಿಗೂ ಉದ್ಯೋಗ ಒದಗಿಸಲು ವಿಫಲರಾಗಿದ್ದಾರೆ. ಆದರೆ ಈಗ ಸಚಿವರು ಈ ನಿಧಿಯ ಶೇ.60ರಷ್ಟು ಮೊತ್ತವನ್ನು ಬೇರೆ ಕಾರ್ಯಕ್ಕೆ ಬಳಸಿದ್ದಾರೆ ಎಂದು ಭೋಪಾಲ್ ಗ್ಯಾಸ್ ಪೀಡಿತ ಮಹಿಳಾ ಕಾರ್ಮಿಕರ ಸಂಘದ ಅಧ್ಯಕ್ಷೆ ರಶೀದಾ ಬೀ ಹೇಳಿದ್ದಾರೆ.
ಹೀಗೆ ಪಡೆಯಲಾದ 75 ಕೋಟಿ ರೂ. ಮೊತ್ತವನ್ನೂ ಸಚಿವರು ತಮ್ಮ ಕ್ಷೇತ್ರದಲ್ಲೇ ಬಳಸಿದ್ದಾರೆ. ಓಟಿನ ಮೇಲೆ ಕಣ್ಣಿಟ್ಟು ಸಚಿವರು ಮಾಡಿರುವ ಈ ಕಾರ್ಯದಿಂದ ಗ್ಯಾಸ್ ದುರಂತ ಬಾಧಿತರು ಸವಲತ್ತು ವಂಚಿತರಾಗಿದ್ದಾರೆ.ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಗೆ ಹೊಂದಿಕೊಂಡಿರುವ ಸ್ಥಳದಲ್ಲಿ ವಾಸಿಸುತ್ತಿರುವವರಿಗೆ ಸುರಕ್ಷಿತ ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆಯನ್ನೂ ಕೈಬಿಡಲಾಗಿದೆ ಎಂದು ಭೋಪಾಲ ಗ್ಯಾಸ್ ಪೀಡಿತ ಮಹಿಳಾ, ಪುರುಷ ಸಂಘರ್ಷ ಮೋರ್ಛಾದ ಅಧ್ಯಕ್ಷ ನವಾಬ್ ಖಾನ್ ಹೇಳಿದ್ದಾರೆ. ಈ ನಿಧಿ ದುರ್ಬಳಕೆಯ ಅಪರಾಧದಲ್ಲಿ ಕೇಂದ್ರ ಸರಕಾರವೂ ಸಹಭಾಗಿಯಾಗಿದೆ ಎಂದು ‘ಭೋಪಾಲ್ ಗ್ರೂಪ್ ಫಾರ್ ಇನ್‌ಫಾರ್ಮೇಶನ್ ಆ್ಯಂಡ್ ಆ್ಯಕ್ಷನ್’ನ ಸದಸ್ಯೆ ರಚನಾ ಧಿಂಗ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ 2104ರಲ್ಲೇ ನಾವು ಸಿಬಿಐಗೆ ಹಾಗೂ ನಿಧಿಯನ್ನು ಒದಗಿಸಿರುವ ರಾಸಾಯನಿಕ ಇಲಾಖೆಗೆ ಪುರಾವೆ ಸಹಿತ ಮಾಹಿತಿ ನೀಡಿದ್ದೆವು. ಆದರೆ ಅಪರಾಧಿಗಳು ಯಾರೆಂದು ತಿಳಿದಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ನಿಧಿಯನ್ನು ಇತರ ಕಾರ್ಯಗಳಿಗೆ ಬಳಸಲು ಈ ವರ್ಷದ ಮಾರ್ಚ್‌ನಲ್ಲಿ ಇಲಾಖೆ ಅನುಮತಿ ನೀಡಿರುವುದಾಗಿ ಇದೀಗ ದಾಖಲೆಗಳಲ್ಲಿ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. ಭೋಪಾಲ ದುರಂತದಲ್ಲಿ ಬದುಕುಳಿದವರಿಗಾಗಿ 2010ರಲ್ಲಿ ಮೀಸಲಿರಿಸಿದ ನಿಧಿಯ ಶೇ.50ಕ್ಕೂ ಹೆಚ್ಚಿನ ಪ್ರಮಾಣದ ನಿಧಿ ಇನ್ನೂ ಬಳಕೆಯಾಗದೆ ಉಳಿದಿದೆ ಎಂಬ ಮಾಹಿತಿಯನ್ನು ಆರ್‌ಟಿಐ ಕಾಯ್ದೆಯಡಿ ದಾಖಲಿಸಿದ ಅರ್ಜಿಯ ಮೂಲಕ ಪಡೆಯಲಾಗಿದೆ. ನಮ್ಮಂತೆ ಸಚಿವರೂ ಕೂಡಾ ಶಾಲಾ ಬಾಲಕನಾಗಿದ್ದರೆ ನಿರಂತರ ವೈಫಲ್ಯಕ್ಕಾಗಿ ಅವರನ್ನು ಕೂಡಾ (ಶಾಲೆಯಿಂದ) ಒದ್ದೋಡಿಸುತ್ತಿದ್ದರು ಎಂದು ‘ಚಿಲ್ಡ್ರನ್ಸ್ ಅಗೈನ್ಸ್ಟ್ ಡೌ ಕಾರ್ಬೈಡ್’ನ ಸದಸ್ಯ ನೌಶೀನ್ ಖಾನ್ ಹೇಳಿದ್ದಾರೆ.







