ನ.30ರಂದು ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶನ: ರೈತ ಸಂಘ ಮುಖಂಡ ಹೊನ್ನೂರು ಪ್ರಕಾಶ್

ಹನೂರು,ನ.22: ಹನೂರು ತಾಲೂಕು ಕಚೇರಿ, ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯ, ಕೊಳ್ಳೇಗಾಲ-ಮ.ಬೆಟ್ಟ ರಸ್ತೆ ಅಭಿವೃದ್ದಿ, ಹಾಗೂ ಹನೂರು ತಾಲೂಕಿನ ಜಲಾಶಯಗಳಿಗೆ ನೀರು ತುಂಬಿಸುವ ಯೋಜನೆ ನೆನೆಗುದ್ದಿಗೆ ಬಿದ್ದಿರುವುದನ್ನು ವಿರೋಧಿಸಿ ನ.30ರಂದು ಮ.ಬೆಟ್ಟದಲ್ಲಿ ಮುಖ್ಯಮಂತ್ರಿಗಳ ಭೇಟಿ ಸಂದರ್ಭ ಕಪ್ಪು ಭಾವುಟ ಪ್ರದರ್ಶನ ಮಾಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.
ಪಟ್ಟಣದ ಅರಣ್ಯ ಇಲಾಖೆ ವಸತಿಗೃಹದಲ್ಲಿ ಕರೆಯಲಾಗಿದ್ದ ಪ್ರತಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯ ಗ್ರಾಮಗಳ ಜನರಿಗೆ ಅವಶ್ಯಕವಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಕಲ್ಪಿಸಿಕೊಡುವಂತೆ ಹಿಂದಿನ ಮುಖ್ಯಮಂತ್ರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳಿಯ ಶಾಸಕರು ಯಾವುದೇ ರೈತರ ಸಭೆ ಕರೆಯದೇ ಇರುವುದು, ಜಿಲ್ಲಾ ಮಟ್ಟದ ರೈತರ ಸಭೆಗಳಿಗೆ ಗೈರು ಹಾಜರಾಗಿರುವುದನ್ನು ಖಂಡಿಸಿ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ತಿಳಿಸಿದ ಅವರು, ಹನೂರು ತಾಲೂಕು ಕೇಂದ್ರವಾಗಿ ಒಂದು ವರ್ಷ ಕಳೆಯುತ್ತಿದ್ದರೂ ಯಾವುದೇ ತಾಲೂಕು ಮಟ್ಟದ ಕಚೇರಿಗಳೂ ಪ್ರಾರಂಭವಾಗಿಲ್ಲ. ಇದರಿಂದ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗಿ, ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಖಜಾಂಚಿ ಶಿವಕುಮಾರಸ್ವಾಮಿ, ಚಾ.ನಗರ ತಾ. ಅಧ್ಯಕ್ಷ ಮಹಾದೇವಸ್ವಾಮಿ, ಹನೂರು ತಾ.ಅಧ್ಯಕ್ಷ ಕರಿಯಪ್ಪ, ಶಾಂತಕುಮಾರ್, ಆರೋಗ್ಯರಾಜು, ಜಡೇಸ್ವಾಮಿ, ಮಾದತಂಬಡಿ ಸೇರಿದಂತೆ ಇನ್ನಿತರರು ಹಾಜರಿದ್ದರು.





