ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡದವರ ವಿರುದ್ಧ ಶಿಸ್ತುಕ್ರಮ: ಚಿಕ್ಕಮಗಳೂರು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ
ಜಿಪಂ ಸಾಮಾನ್ಯ ಸಭೆ

ಚಿಕ್ಕಮಗಳೂರು, ನ.22: ಜಿಲ್ಲಾ ಪಂಚಾಯತ್ ಕಚೇರಿಯ ನಝೀರ್‍ಸಾಬ್ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯರಿಗೆ ಸರಕಾರಿ ಯೋಜನೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡದಿರುವುದು, ಕೃಷಿ, ಪಶುಪಾಲನಾ ಇಲಾಖೆಗಳ ಸೌಲಭ್ಯ ವಿತರಣೆಗಳಲ್ಲಿನ ಲೋಪ, ಶಿಕ್ಷಣ ಇಲಾಖೆ ಕಾರ್ಯವೈಖರಿ ಸಂಬಂಧ ಬಿರುಸಿನ ಚರ್ಚೆ ನಡೆಯಿತು.
ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಪಂ ಸದಸ್ಯ ಬೆಳವಾಡಿ ರವೀಂದ್ರ ಆರಂಭಿಸಿ, ವಿವಿಧ ಇಲಾಖಾಧಿಕಾರಿಗಳು ಸರಕಾರ ಜಾರಿ ಮಾಡುವ ಯೋಜನೆಗಳು ಹಾಗೂ ಸೌಲಭ್ಯಗಳ ಬಗ್ಗೆ ಜಿಪಂ ಸದಸ್ಯರಿಗೇ ಮಾಹಿತಿ ನೀಡುತ್ತಿಲ್ಲ. ಜಿಪ ಸದಸ್ಯರನ್ನೇ ನಿರ್ಲಕ್ಷ್ಯಿಸುವ ಅಧಿಕಾರಿಗಳು ಇನ್ನು ಸಾಮಾನ್ಯ ಜನರೊಂದಿಗೆ ಹೇಗೆ ನಡೆದುಕೊಳ್ಳಬಹುದು. ಸರಕಾರಿ ಯೋಜನೆ, ಸೌಲಭ್ಯಗಳ ಬಗ್ಗೆ ಜಿಪಂ ಸದಸ್ಯರಿಗೆ ಮಾಹಿತಿ ನೀಡದ ಮೇಲೆ ಜಿಲ್ಲಾ ಪಂಚಾಯತ್ ಸದಸ್ಯರ ಆವಶ್ಯಕತೆ ಏಕಿರಬೇಕೆಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರತೀ ಸಭೆಗಳಲ್ಲೂ ಅಧಿಕಾರಿಗಳು ಹೀಗೆ ಮಾಡುತ್ತಾರೆ. ಸಭೆಯಲ್ಲೂ ಈ ವಿಚಾರ ಚರ್ಚೆಯಾಗುತ್ತದೆ. ಆದರೆ ಅಧಿಕಾರಿಗಳು ಮಾತ್ರ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಿಲ್ಲ ಎಂದು ದೂರಿದರು.
ಬೆಳವಾಡಿ ರವೀಂದ್ರ ಅವರ ಆರೋಪಕ್ಕೆ ಜಿಪಂ ಸದಸ್ಯರಾದ ಸುಧಾ, ಜಿ.ಪಂ. ಉಪಾಧ್ಯಕ್ಷ ಆನಂದಪ್ಪ ಧ್ವನಿಗೂಡಿಸುತ್ತಿದ್ದಂತೆ ಮಧ್ಯೆ ಪ್ರವೇಶಿಸಿ ಮಾತನಾಡಿದ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಸರಕಾರಿ ಯೋಜನೆಗಳು, ಸೌಲಭ್ಯಗಳ ಬಗ್ಗೆ ಸದಸ್ಯರ ಗಮನಕ್ಕೆ ತರುವುದು ಅಧಿಕಾರಿಗಳ ಕರ್ತವ್ಯ. ಅದರ ಬಗ್ಗೆ ನಿರ್ಲಕ್ಷ್ಯ ವಹಿಸುವುದನ್ನು ಸಹಿಸುವುದಿಲ್ಲ. ಸೌಲಭ್ಯಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸಿಇಒ ಸತ್ಯಭಾಮ ಅವರಿಗೆ ಸೂಚಿಸಿದರು.
ನಂತರ ನಡೆದ ಚರ್ಚೆಯಲ್ಲಿ ಪಶುಪಾಲನಾ ಇಲಾಖೆಯಿಂದ ನೀಡುತ್ತಿರುವ ಕೃಷಿಭಾಗ್ಯ ಯೋಜನೆಯಡಿ ಗಿರಿರಾಜ ಕೋಳಿಗಳ ಸಾಕಣೆಗೆ ಮರಿಗಳನ್ನು ನೀಡಲಾಗುತ್ತಿದೆ. ಆದರೆ ಗಿರಿರಾಜ ಕೋಳಿಗಳನ್ನು ಮಲೆನಾಡಿನ ಜನತೆ ಒಪ್ಪುತ್ತಾರೆ. ಅಲ್ಲಿನ ವಾತಾವರಣಕ್ಕೆ ಸಾಕಣೆ ಮಾಡಬಹುದು. ಆದರೆ ಬಯಲುಸೀಮೆ ಭಾಗಕ್ಕೆ ನಾಟಿಕೋಳಿಗಳ ಅಗತ್ಯವಿದೆ ಎಂದು ಕಡೂರು ಕ್ಷೇತ್ರದ ಜಿಪಂ ಸದಸ್ಯ ಮಹೇಶ್ ಒಡೆಯರ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಪಶುಪಾಲನಾ ಇಲಾಖೆ ಉಪನಿರ್ದೇಶಕರು, ಜಿಪಂ ವತಿಯಿಂದ ಸಲ್ಲಿಸಿದ್ದ ಕ್ರಿಯಾ ಯೋಜನೆಗೆ ಸರಕಾರ ಅನುಮೋದನೆ ನೀಡಿರುವಂತೆ ಗಿರಿರಾಜ ಕೋಳಿಗಳನ್ನು ನೀಡಲಾಗುತ್ತಿದೆ ಎಂದಾಗ, ಜಿ.ಪಂ. ಉಪಾಧ್ಯಕ್ಷ ಆನಂದಪ್ಪ ಮಾತನಾಡಿ, ಜನರು ಬಯಸಿದ್ದನ್ನು ನೀಡಿದರೇ ಮಾತ್ರ ಯೋಜನೆ ಫಲಿಸುತ್ತದೆ ಎಂದರು.
ಬಳಿಕ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಪರಿಶಿಷ್ಟರನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಕೃಷಿಭಾಗ್ಯ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ಫಲಾನುಭವಿಗಳನ್ನು ಆಯ್ಕೆ ಮಾಡಿದ ಬಳಿಕ ಬ್ಯಾಂಕ್‍ನವರು ಸಾಲ ನೀಡುವುದಿಲ್ಲ ಎಂದು ಹೇಳುತ್ತಾ ಫಲಾನುಭವಿಗಳನ್ನು ಸತಾಯಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಇದಕ್ಕೆ ಪರಿಹಾರವಾಗಿ ಅರ್ಜಿ ಸಲ್ಲಿಸುವ ಸಮಯದಲ್ಲೇ ಬ್ಯಾಂಕ್‍ಗಳು ಸಾಲ ನೀಡುವ ದೃಢೀಕರಣ ಪತ್ರ ಪಡೆದುಕೊಂಡು ಅರ್ಜಿ ಸಲ್ಲಿಸಬೇಕು. ಆಗ ಮಾತ್ರ ಯೋಜನೆ ನೈಜ ಫಲಾನುಭವಿಗಳೊಗೆ ಸಿಗಲು ಸಾಧ್ಯ ಎಂಬ ಸಲಹೆಯನ್ನು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿ ಜಿಪಂ ಉಪಾಧ್ಯಕ್ಷ ಆನಂದಪ್ಪ, ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಿ ಸರಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಸಿ.ಇ.ಓ. ಸತ್ಯಭಾಮಾ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಬಣಕಲ್ ಕ್ಷೇತ್ರದ ಸದಸ್ಯ ಶಾಮಣ್ಣ ಮಾತನಾಡಿ, ಜಿಲ್ಲೆಯಲ್ಲಿ ಎಸೆಸೆಲ್ಸಿ ಫಲಿತಾಂಶ ತೃಪ್ತಿಕರವಾಗಿಲ್ಲ. ಉತ್ತಮ ಫಲಿತಾಂಶಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕಡಿಮೆ ಫಲಿತಾಂಶ ಬಂದ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ನಡೆಸಲಾಗಿದೆ. ವಿದ್ಯಾರ್ಥಿಗಳು ಹಿಂದುಳಿದ ವಿಷಯಗಳಿಗೆ ವಿಶೇಷ ತರಗತಿ ನಡೆಸುವುದೂ ಸೇರಿದಂತೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪೋಷಕರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದರು. ಆಗ ಶಾಮಣ್ಣ ಪ್ರತಿಕ್ರಿಯಿಸಿ, ಸಭೆ ನಡೆಸಿದರೆ ಮಾತ್ರ ಸಾಲದು ಶಾಲೆಗಳಿಗೆ ಭೇಟಿನೀಡಿ ಶಿಕ್ಷಕರು ಯಾವ ರೀತಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಪರಿಶೀಲನೆ ನಡೆಸಬೇಕು. ಫಲಿತಾಂಶದಲ್ಲಿ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಬರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.







