ಹೆಜಮಾಡಿ ಬಂದರಿಗೆ ಉಡುಪಿ, ದ.ಕ. ಜಿಲ್ಲಾಧಿಕಾರಿಗಳ ಭೇಟಿ

ಪಡುಬಿದ್ರಿ, ನ. 22: ಹೆಜಮಾಡಿಯಲ್ಲಿ ಸುಮಾರು 138.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.
ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಸಮಾಲೋಚಿಸಲು ಹಾಗೂ ಸ್ಥಳ ಪರಿಶೀಲನೆಗೆ ಗುರುವಾರ ಸಂಜೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮತ್ತು ದಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮೀನುಗಾರಿಕೆ ಹಾಗೂ ಬಂದರು ಇಲಾಖಾ ಅಧಿಕಾರಿಗಳ ಜತೆಗೆ ಆಗಮಿಸಿ ಸಂದರ್ಭದಲ್ಲಿ ಮಾತನಾಡಿದರು.
ಈಗಾಗಲೇ ಮೀನುಗಾರಿಕಾ ಬಂದರು ಯೋಜನೆ ಜಾರಿಗೆ ಕೇಂದ್ರ ಸರಕಾರದ ಅನುದಾನ ಬಿಡುಗಡೆಯಾಗಿದೆ. ರಾಜ್ಯ ಸರಕಾರವೂ ಹಸಿರು ನಿಶಾನೆ ತೋರಿಸಿದೆ ಎಂದರು.
ಆರಂಭಿಕವಾಗಿ ಬ್ರೇಕ್‍ವಾಟರ್ ಕಾಮಗಾರಿಗೆ ಚಾಲನೆ ನೀಡಲಿದ್ದು, ಈ ಭಾಗದ ಖಾಸಗಿ ಜಾಗಗಳನ್ನು ಗುರುತಿಸಿ ವಶಕ್ಕೆ ಪಡೆಯಲು ಆರ್‍ಐಗೆ ಸೂಚನೆ ನೀಡಲಾಗಿದೆ. ಇಲ್ಲಿ ಬಂದರು ನಿರ್ಮಾಣಗೊಂಡಲ್ಲಿ ಈ ಭಾಗದ ಎಲ್ಲಾ ಮೀನುಗಾರರಿಗೆ ತುಂಬಾ ಅನುಕೂಲವಾಗಲಿದ್ದು, ಮಲ್ಪೆ ಮತ್ತು ಮಂಗಳೂರು ಮೀನುಗಾರಿಕಾ ಬಂದರಿನ ಒತ್ತಡ ಕಡಿಮೆಯಾಗಲಿದೆ ಎಂದರು.
ದಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಹೆಜಮಾಡಿಯ ಮೀನುಗಾರಿಕಾ ಬಂದರು ಯೋಜನೆಗೆ ನಿರ್ಮಾಣಗೊಳ್ಳಲಿರುವ ಬ್ರೇಕ್ ವಾಟರ್‍ನಿಂದ ದಕ ಜಿಲ್ಲೆಯ ಸಸಿಹಿತ್ಲು ಭಾಗದಲ್ಲಿ ತಾತ್ಕಾಲಿಕ ಸಮುದ್ರ ಕೊರೆತ ಉಂಟಾಗುವ ಸಾಧ್ಯತೆ ಇರುವ ಬಗ್ಗೆ ಅಲ್ಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆಗೆ ಆಗಮಿಸಿರುವುದಾಗಿ ಹೇಳಿದರು.
ಹೆಜಮಾಡಿ ಬ್ರೇಕ್‍ವಾಟರ್ ನಿರ್ಮಾಣದಿಂದ ಸಮುದ್ರ ಕೊರೆತ ಉಂಟಾಗಲಿದೆಯೇ ಮತ್ತು ಒತ್ತುವರಿ ಮರಳು ಯಾವ ಕಡೆ ಶೇಖರಣೆಯಾಗುತ್ತದೆ ಎಂದು ತಂತ್ರಜ್ಞರಿಂದ ಪರಿಶೀಲನೆ ನಡೆಸಲು ಉಡುಪಿ ಜಿಲ್ಲಾಧಿಕಾರಿಗಳು ಬಂದರು ಮತ್ತು ಮೀನುಗಾರಿಕಾ ಇಲಾಖಾ ಇಇ ಮಂಚೇಗೌಡರಿಗೆ ಸೂಚಿಸಿದರು.
ಸ್ಥಳದಲ್ಲಿಯೇ ಪುಣೆಯ ಸಿಡಬ್ಲ್ಯುಪಿಆರ್‍ಎಸ್‍ನ ವಿಜ್ಞಾನಿ ಮಹಾಲಿಂಗಯ್ಯ ಜತೆ ದೂರವಾಣಿ ಮೂಲಕ ಮಾತನಾಡಿ ಆದಷ್ಟು ಶೀಘ್ರ ಈ ಬಗ್ಗೆ ಸಂಶೋಧನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಯಿತು.
ಈಗಾಗಲೇ ಸರ್ಕಾರವು 63 ಎಕ್ರೆ ಜಾಗವನ್ನು ಬಂದರು ಯೋಜನೆಗಾಗಿ ಗುರುತಿಸಿದೆ. 4 ಖಾಸಗಿ ಜಾಗಗಳು ಒಳಗೊಂಡಿವೆ. ಅವನ್ನು ಬಹುಬೇಗ ವಶಕ್ಕೆ ಪಡೆಯಲು ಬೇಕಾದ ಕ್ರಮ ಕೈಗೊಳ್ಳುವಂತೆ ಪ್ರಿಯಾಂಕ ಮೇರಿಯವರು ಕಾಪು ಆರ್ ಐ ರವಿಶಂಕರ್ ರಿಗೆ ಸೂಚಿಸಿದರು.
ಉಭಯ ಜಿಲ್ಲಾಧಿಕಾರಿಗಳಿಗೆ ಮುಲ್ಕಿ ವಲಯ ಪರ್ಸೀನ್ ಮತ್ತು ಟ್ರಾಲ್ ಬೋಟ್ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ಎಸ್.ಬಂಗೇರ, ಮೀನುಗಾರ ಮುಖಂಡರುಗಳಾದ ವೈ. ಗಂಗಾಧರ ಸುವರ್ಣ, ಏಕನಾಥ ಕರ್ಕೇರ, ಹರಿಶ್ಚಂದ್ರ ಮೆಂಡನ್, ಚಂದ್ರಕಾಂತ ಶ್ರೀಯಾನ್, ಚಂದ್ರಶೇಖರ ಸಾಲ್ಯಾನ್, ಗ್ರಾಮ ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಪಿಡಿಒ ಮಮತಾ ಶೆಟ್ಟಿ, ಸದಸ್ಯರಾದ ಪ್ರಾಣೇಶ್ ಹೆಜ್ಮಾಡಿ, ಶೈಲೇಶ್ ಕುಂದರ್ ಮತ್ತು ಶಿವರಾಮ ಶೆಟ್ಟಿ, ಜಿಲ್ಲಾ ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ರೇಣುಕಾ ಪುತ್ರನ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಸನಾ ಇಬ್ರಾಹಿಂ, ಇಲಾಖಾಧಿಕಾರಿಗಳಾದ ಮೀನುಗಾರಿಕಾ ಇಲಾಖಾ ಡಿಡಿ ಪಾಶ್ರ್ವನಾಥ್, ಎಡಿ ಕಿರಣ್, ಬಂದರು ಇಲಾಖಾ ಎಇಇ ಉದಯ ಕುಮಾರ್, ಮುಲ್ಕಿ ವಿಶೇಷ ತಹಶೀಲ್ದಾರ್ ಮಾಣಿಕ್ಯ, ಗ್ರಾಮಕರಣಿಕರಾದ ಶ್ಯಾಂಸುಂದರ್ ಮತ್ತು ಮೋಹನ್, ಆರ್ ಐ ದಿಲೀಪ್ ರೋಡ್ಕರ್ ಮತ್ತಿತರರು ಉಪಸ್ಥಿತರಿದ್ದರು.