ಪೈಪ್‌ಲೈನ್ ನಿಂದ ಮನೆಮನೆಗೆ ಗ್ಯಾಸ್ ಯೋಜನೆಗೆ ಪ್ರಧಾನಿಯಿಂದ ಶಿಲಾನ್ಯಾಸ
18 ರಾಜ್ಯಗಳ 129 ಜಿಲ್ಲೆಗಳಲ್ಲಿ ಅನಿಲ ಪೂರೈಕೆ

ಹೊಸದಿಲ್ಲಿ,ನ.22: ದೇಶದ ಶೇ.25ಕ್ಕೂ ಹೆಚ್ಚಿನ ಜನಸಂಖ್ಯೆಯ 18 ರಾಜ್ಯಗಳ 129 ಜಿಲ್ಲೆಗಳಲ್ಲಿ ವಾಹನಗಳಿಗೆ ಸಿಎನ್‌ಜಿ ಮತ್ತು ಮನೆಮನೆಗಳಿಗೆ ಪೈಪ್‌ಗಳ ಮೂಲಕ ಅಡುಗೆ ಅನಿಲವನ್ನು ಪೂರೈಸುವ ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶಿಲಾನ್ಯಾಸವನ್ನು ನೆರವೇರಿಸಿದರು.
ಪರಿಸರ ಸ್ನೇಹಿ ನೈಸರ್ಗಿಕ ಅನಿಲವನ್ನು ವಾಹನಗಳು ಮತ್ತು ಅಡುಗೆ ಇಂಧನವನ್ನಾಗಿ ಬಳಸುವ ಮೂಲಕ ಮಾಲಿನ್ಯ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸರಕಾರವು ಆಸಕ್ತಿ ಹೊಂದಿದ್ದು,50 ಭೌಗೋಳಿಕ ಪ್ರದೇಶಗಳಲ್ಲಿ ಸೇರಿಸಲಾಗಿರುವ 124 ಹೊಸ ಜಿಲ್ಲೆಗಳಿಗೆ ನಗರ ಅನಿಲ ಪೂರೈಕೆ ಪರವಾನಿಗೆಗಾಗಿ 10ನೇ ಸುತ್ತಿನ ಟೆಂಡರ್ ಆಹ್ವಾನ ಪ್ರಕ್ರಿಯೆಗೂ ಮೋದಿ ಚಾಲನೆ ನೀಡಿದರು.
ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ ಅವರು,10ನೇ ಸುತ್ತು ಮುಗಿದ ಬಳಿಕ 400ಕ್ಕೂ ಅಧಿಕ ಜಿಲ್ಲೆಗಳು ಮತ್ತು ಶೇ.70ರಷ್ಟು ಜನಸಂಖ್ಯೆ ನೈಸರ್ಗಿಕ ಅನಿಲ ಪೂರೈಕೆ ವ್ಯಾಪ್ತಿಯಲ್ಲಿ ಬರಲಿವೆ ಎಂದರು.
10ನೇ ಸುತ್ತಿನವರೆಗೆ ಟೆಂಡರ್‌ಗಳನ್ನು ನೀಡಲಾಗಿರುವ ನಗರಗಳಲ್ಲಿ ಪೈಪ್‌ಜಾಲಗಳು ಪೂರ್ಣಗೊಂಡ ಬಳಿಕ ಅಡುಗೆ ಅನಿಲ ಸಂಪರ್ಕಗಳ ಸಂಖ್ಯೆಎರಡು ಕೋಟಿಗೆ ತಲುಪಲಿದೆ ಎಂದು ಅವರು ಹೇಳಿದರು. ಪ್ರಸ್ತುತ 32 ಲಕ್ಷ ಬಳಕೆದಾರರು ತಮ್ಮ ಮನೆಗಳಿಗೆ ಪೈಪ್‌ಗಳ ಮೂಲಕ ಅಡುಗೆ ಅನಿಲ ಸಂಪರ್ಕಗಳನ್ನು ಹೊಂದಿದ್ದಾರೆ.







