ಮಣಿಪಾಲ: ಕ್ರಿಸ್ಮಸ್ ಕೇಕ್‌ಗೆ ಡ್ರೈಫ್ರುಟ್ಸ್ ಮಿಕ್ಸಿಂಗ್

ಉಡುಪಿ, ನ.23: ಮುಂಬರುವ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಸಂದರ್ಭಕ್ಕಾಗಿ ಸಾಂಪ್ರದಾಯಿಕ ಕೇಕ್ ಮಿಕ್ಸ್ ಕಾರ್ಯಕ್ರಮ ಮಣಿಪಾಲದ ನೂತನ ವಾಗ್ಷಾ ಕಟ್ಟಡದ ಪಾಕಶಾಸ್ತ್ರ ಹಾಸ್ಟೆಲ್ ಮೆಸ್‌ನಲ್ಲಿ ಶುಕ್ರವಾರ ಸಂಜೆ ಗಣ್ಯರ ಸಮ್ಮುಖದಲ್ಲಿ ನಡೆಯಿತು.
ಮಣಿಪಾಲ ಮಾಹೆಯ ವೆಲ್‌ಕಮ್ ಗ್ರೂಪ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿಸ್ಟ್ರೇಷನ್ ಹಾಗೂ ಫಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್ ಗಳ ಜಂಟಿ ಆಶ್ರಯದಲ್ಲಿ ನಡೆದ ಕೇಕ್ ಮಿಕ್ಸಿಂಗ್ ಕಾರ್ಯಕ್ರಮದಲ್ಲಿ ಕಿಲೋಗಟ್ಟಲೆ ನಟ್ಸ್ ಮತ್ತು ಡ್ರೈಪ್ರುಟ್ಸ್‌ಗಳನ್ನು ವಿವಿಧ ಬಗೆಯ ಮದ್ಯದಲ್ಲಿ ಕಲಸಿ ನೆನಸಿ ಇಡಲಾಯಿತು.
‘ಕೇಕ್ ಮಿಕ್ಸಿಂಗ್ ಉತ್ಸವ ವಿದೇಶಗಳಲ್ಲಿ ವಿಶೇಷವಾಗಿ ಯುರೋಪ್, ಇಂಗ್ಲೆಂಡ್ ಹಾಗೂ ಅಮೆರಿಕಗಳಲ್ಲಿ ಶತಮಾನಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ. ಕ್ರಿಸ್‌ಮಸ್‌ಗೆ ಇನ್ನೂ ತಿಂಗಳು ಇರುವಾಗಲೇ ರುಚಿಕರ ಕೇಕ್ ತಯಾರಿಗಾಗಿ ಒಣ ಹಣ್ಣುಗಳನ್ನು ವಿವಿಧ ಬಗೆಯ ಹಣ್ಣಿನ ರಸ, ಬಿಳಿ ಮತ್ತು ಕೆಂಪು ವೈನ್ ಹಾಗೂ ಮದ್ಯದೊಂದಿಗೆ ಮಿಕ್ಸ್ ಮಾಡುವ ಪೂರ್ವ ತಯಾರಿಯೇ ಈ ಕೇಕ್‌ಮಿಕ್ಸಿಂಗ್. ಕೇಕ್‌ಮಿಕ್ಸಿಂಗ್ ಉಗಮ 17ನೇ ಶತಮಾನದಲ್ಲಾದರೆ, ಇದನ್ನು ಈಗಲೂ ಮುಂದುವರಿಸಿಕೊಂಡು ಬರಲಾ ಗುತ್ತಿದೆ’ ಎಂದು ವಾಗ್ಷಾದ ಪ್ರಾಂಶುಪಾಲ್ ಚೆಫ್ ತಿರುನನ್ ಸಂಬನಾಥನ್ ಕೆ. ಹಾಗೂ ಚೆಫ್ ವಸಂತನ್ ಎಸ್. ಮಾಹಿತಿ ನೀಡಿದರು.
ಇಂದು ಒಟ್ಟು 1.80 ಲಕ್ಷ ರೂ. ಮೌಲ್ಯದ ಸುಮಾರು 260 ಕೆ.ಜಿ.ಯಷ್ಟು ಗೋಡಂಬಿ ಬೀಜ, ಒಣದ್ರಾಕ್ಷೆ, ಟೂಟಿ-ಫ್ರೂಟಿ, ಚೆರ್ರಿ, ಬಾದಾಮ್, ಅಲ್ಮೋಡ ಹಾಗೂ ಇತರ ಡ್ರೈ ಫ್ರುಟ್ಸ್‌ಗಳನ್ನು 80 ಲೀ.ನಷ್ಟು ರಮ್, ಬ್ರಾಂಡಿ, ಬಿಳಿ ಮತ್ತು ಕೆಂಪು ವೈನ್, ದ್ರಾಕ್ಷಾರಸ, ಕಿತ್ತಳೆ ರಸ ಹಾಗೂ ಜೇನುತುಪ್ಪದೊಂದಿಗೆ ಬೆರೆಸಿ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಸುಮಾರು ಒಂದು ತಿಂಗಳ ಕಾಲ ಮುಚ್ಚಿಟ್ಟು, ನಂತರ ಅದರಿಂದ ವೈವಿಧ್ಯಮಯ ಕೇಕ್ ತಯಾರಿಸಲಾಗುತ್ತದೆ. ಸಂಪ್ರದಾಯದಂತೆ ಇದಕ್ಕೆ ಬೆಳ್ಳಿ ನಾಣ್ಯಗಳನ್ನೂ ಸಹ ಮಿಕ್ಸ್ ಮಾಡಲಾಗುತ್ತದೆ. ಇದು ಅಲ್ಲಿ ಕೊಯ್ಲಿನ ಕಾಲದಲ್ಲಿ ನಡೆಯುವ ಒಂದು ಉತ್ಸವವಾಗಿ ಆಚರಿಸಲ್ಪ ಡುತ್ತದೆ ಎಂದವರು ನುಡಿದರು.
ಕೇಕ್ ಮಿಕ್ಸ್‌ಗೆ ಮಣಿಪಾಲ ವಿವಿ ಚಾನ್ಸಲರ್ ಡಾ. ರಾಮದಾಸ್ ಪೈ ಅವರ ಪತ್ನಿ ವಸಂತಿ ಪೈ ಚಾಲನೆ ನೀಡಿದರು. ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್, ಇಂದಿರಾ ಬಲ್ಲಾಳ್, ಕುಲಪತಿ ಡಾ.ವಿನೋದ್ ಭಟ್, ಸಹ ಕುಲಪತಿಗಳಾದ ಡಾ.ಪೂರ್ಣಿಮಾ ಬಾಳಿಗಾ, ಡಾ.ಪಿಎಲ್‌ಎನ್‌ಜಿ ರಾವ್, ರಿಜಿಸ್ಟಾರ್ ಡಾ.ನಾರಾಯಣ ಸಭಾಹಿತ್, ವ್ಯಾಲಿವ್ಯೆನ ಜನರಲ್ ಮ್ಯಾನೇಜ್ ಉದಯ್ ಶರ್ಮ, ವಾಗ್ಷಾದ 10ನೇ ಬ್ಯಾಚ್‌ನ ಸುಮಾರು 34 ಮಂದಿ ಹಳೆ ವಿದ್ಯಾರ್ಥಿಗಳೂ ಇಂದಿನ ಕೇಕ್ ಮಿಕ್ಸ್‌ನಲ್ಲಿ ಉತ್ಸಾಹದಿಂದ ಪಾಲ್ಗೊಂಡರು.