ಸರಕಾರ ರೈತರ ಸಾಲಮನ್ನಾ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಕರಂದ್ಲಾಜೆ
ಸಕಾಲ, ಬಾಪೂಜಿ ಸೇವಾ ಕೆೀಂದ್ರದ ವೈಫಲ್ಯತೆ ವಿರೋಧಿಸಿ ಧರಣಿ

ಉಡುಪಿ, ನ.23: ಮುಖ್ಯಮಂತ್ರಿ ರಾಜ್ಯದ ರೈತರ 49ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದರೆ ಒಬ್ಬನೆ ಒಬ್ಬ ರೈತನಿಗೆ ಸಾಲ ಮನ್ನಾ ಆಗಿರುವುದು ಗೊತ್ತಿಲ್ಲ. ಆದುದರಿಂದ ಯಾರಿಗೆ ಹಾಗೂ ಎಷ್ಟು ಹಣ ಸಾಲಮನ್ನಾ ಮಾಡಲಾಗಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿ ಗಳು ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ
ಉಡುಪಿ ಜಿಲ್ಲಾ ಬಿಜೆಪಿ ಪಂಚಾಯತ್‌ರಾಜ್ ಪ್ರಕೋಷ್ಠದ ವತಿಯಿಂದ ಸಕಾಲ ಹಾಗೂ ಬಾಪೂಜಿ ಸೇವಾ ಕೇಂದ್ರದ ವೈಫಲ್ಯತೆ ವಿರೋಧಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಹಮ್ಮಿಕೊಳ್ಳಲಾದ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ಬರಗಾಲ ಪೀಡಿತ ತಾಲೂಕುಗಳಲ್ಲಿ ಈವರೆಗೆ ಯಾವುದೇ ಪರಿಹಾರ ಕಾರ್ಯ ನಡೆಯುತ್ತಿಲ್ಲ. ಕೊಡಗು, ಕರಾವಳಿ ಜಿಲ್ಲೆಯ ನೆರಹಾವಳಿಯಿಂದ ನಷ್ಟವಾದ ಯಾವುದೇ ಕಾಮಗಾರಿಯೂ ಆರಂಭಗೊಂಡಿಲ್ಲ. ಹೀಗೆ ಸರಕಾರ ರಾಜ್ಯವನ್ನು ನಿರ್ಲಕ್ಷ ಮಾಡುತ್ತಿದೆ. ಐದು ತಿಂಗಳಲ್ಲಿ ಜನರಿಗೆ ಈ ಸರಕಾರದ ಬಗ್ಗೆ ಭ್ರಮನಿರಸನವಾಗಿದೆ. ಈ ಸರಕಾರ ರಾಜ್ಯದ ಜನರ ಪಾಲಿಗೆ ಸತ್ತಿದೆ ಎಂದು ಅವರು ಆರೋಪಿಸಿದರು.
ಈ ಹಿಂದೆ ಬಿಜೆಪಿ ಸರಕಾರ ಜಾರಿಗೆ ತಂದ ಎಲ್ಲ ಯೋಜನೆಗಳನ್ನು ಕಡಿತ ಗೊಳಿಸುವ ಕಾರ್ಯವನ್ನು ಈಗಿನ ಸರಕಾರ ಮಾಡುತ್ತಿದೆ. ಇಂದು ಬಾಪೂಜಿ ಕೇಂದ್ರದಲ್ಲಿ ಏನು ಸಿಗುತ್ತಿಲ್ಲ. ಇಲ್ಲಿ ಸೇವೆ ನೀಡುವುದರಲ್ಲಿ ಸರಕಾರಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಆದುದರಿಂದ ಸರಕಾರ ಬಾಪೂಜಿ ಕೇಂದ್ರಗಳಲ್ಲಿ ಎಲ್ಲ ಸೌಲಭ್ಯ ಗಳು ಒದಗಿಸಿ, ಸರಳೀಕರಣ ಮಾಡಬೇಕು ಎಂದು ಅವರು ಆಗ್ರಹಿಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತ ನಾಡಿ, ಬಾಪೂಜಿ ಕೇಂದ್ರದ ಎಲ್ಲ ಸಮಸ್ಯೆಗಳನ್ನು ಸರಿಪಡಿಸುವ ಇಚ್ಛಾಶಕ್ತಿ ಸಮ್ಮಿಶ್ರ ಸರಕಾರಕ್ಕೆ ಇಲ್ಲ. ಈ ಕುರಿತು ವಿಧಾನಸಭೆ ಹಾಗೂ ವಿಧಾನ ಪರಿಷತ್ ಅಧಿ ವೇಶನದಲ್ಲಿ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲಾಗು ವುದು. ಇದಕ್ಕೆ ಸರಕಾರ ಸ್ಪಂದಿಸದಿದ್ದರೆ ಈ ಹೋರಾಟಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಬೆಳ ಗಾವಿ ಅಧಿವೇಶನದವರೆಗೂ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಸುನೀಲ್ ಕುಮಾರ್, ಲಾಲಾಜಿ ಆರ್.ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸಾಣೂರು ನರಸಿಂಹ ಕಾಮತ್, ಕಾರ್ಕಳ ಪ್ರಕೋಷ್ಠದ ಅರುಣ್ ಹೆಗ್ಡೆ ಮಾತನಾಡಿದರು. ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಲಾಯಿತು.
ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉಪೇಂದ್ರ ನಾಯಕ್, ಕಟಪಾಡಿ ಶಂಕರ ಪೂಜಾರಿ, ವಿಜಯ ಕುಮಾರ್ ಉದ್ಯಾವರ, ಶಿಲ್ಪಾ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ರೇಶ್ಮಾ ಉದಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.