10 ಮಂದಿ ಮಟ್ಕಾ ಆರೋಪಿಗಳ ಗಡಿಪಾರಿಗೆ ಪ್ರಸ್ತಾಪ: ಎಸ್ಪಿ ನಿಂಬರ್ಗಿ

ಉಡುಪಿ, ನ.23: ಉಡುಪಿ ಜಿಲ್ಲೆಯಲ್ಲಿ ಇನ್ನೂ 10 ಮಂದಿ ಮಟ್ಕಾ ದಂಧೆ ನಡೆಸುತ್ತಿರುವವರನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಜಿಲ್ಲಾಧಿಕಾರಿ ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರ್ಗಿ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿಂದು ನಡೆದ ನೇರ ಫೋನ್ ಇನ್ ಕಾರ್ಯ ಕ್ರಮದಲ್ಲಿ ಅವರು ಮಾಧ್ಯಮದವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಈ ವರ್ಷದ ಮಾರ್ಚ್-ಎಪ್ರಿಲ್‌ನಲ್ಲಿ 10 ಮಂದಿ ಮಟ್ಕಾ ದಂಧೆಕೋರರನ್ನು ಮೂರು ತಿಂಗಳ ಅವಧಿಗೆ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಇದೀಗ ಮತ್ತೆ 10 ಮಂದಿಯ ಗಡಿಪಾರು ಕುರಿತು ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ ಶಿಫಾರಸ್ಸು ಮಾಡಲಿದ್ದಾರೆ. ಅಲ್ಲದೆ ಮುಂದೆ ಗಡಿಪಾರು ಮಾಡಲು ಮತ್ತೆ 10 ಮಂದಿಯ ಪಟ್ಟಿಯನ್ನು ಕೂಡ ತಯಾರಿಸಲಾಗಿದೆ ಎಂದರು.
ಉದ್ಯಾವರ ಪಡುಕೆರೆ ರಸ್ತೆಯಲ್ಲಿ ಸಮುದ್ರ ಕೊರೆತಕ್ಕೆ ಕಲ್ಲು ಸಾಗಿಸುವ ಟಿಪ್ಪರ್ ಗಳ ಸಂಚಾರದಿಂದ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ಧೂಳಿನಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಡೆಯಲು ತೊಂದರೆ ಅನುಭವಿಸುತ್ತಿ ದ್ದಾರೆ ಎಂದು ದೂರಲಾಯಿತು. ಇದು ಸಕ್ರಮವಾಗಿ ನಡೆಯುವ ಸರಕಾರದ ಯೋಜನೆಯಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ಸರಿಪಡಿಸಲಾಗುವುದು ಎಂದು ಎಸ್ಪಿ ಹೇಳಿದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ಅಕ್ರಮ ಕಲ್ಲು ಗಣಿಗಾರಿಕೆ, ಇಸ್ಪೀಟ್ ಜುಗಾರಿ, ಮಟ್ಕಾ ದಂಧೆ, ಅಕ್ರಮ ಮದ್ಯ ಮಾರಾಟದ ಕುರಿತು ಗೌಪ್ಯ ಮಾಹಿತಿಗಳನ್ನು ಸಾರ್ವಜನಿಕರು ಕರೆ ಮಾಡಿ ಎಸ್ಪಿಗೆ ನೀಡಿದರು.
ಟಿಪ್ಪರ್ ಚಾಲಕರ ಸಭೆ: ಶಿರ್ವ ಕೋರೆಯ ಕಲ್ಲು ಸಾಗಾಟದ ಟಿಪ್ಪರ್ ಗಳಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಆಗುತ್ತಿರುವ ಮತ್ತು ಕುರ್ಕಾಲು ಗ್ರಾಪಂ ವ್ಯಾಪ್ತಿಯಲ್ಲಿ ಬೃಹತ್ ಗಾತ್ರದ ಕಲ್ಲುಗಳನ್ನು ಅಪಾಯಕಾರಿಯಾಗಿ ಸಾಗಿಸುತ್ತಿರುವ ಕುರಿತ ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಈ ಸಂಬಂಧ ಆಯಾ ಠಾಣಾ ವ್ಯಾಪ್ತಿಯಲ್ಲಿ ಟಿಪ್ಪರ್ ಮಾಲಕರು ಹಾಗೂ ಚಾಲಕರ ಸಭೆ ಕರೆದು ನಿಯಮ ಪಾಲಿಸುವಂತೆ ತಿಳಿಸಲಾಗುವುದು. ಇಲ್ಲದಿದ್ದರೆ ಅಂತಹ ಟಿಪ್ಪರ್‌ಗಳ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದರು.
ಉಡುಪಿ ಕುಂಜಿಬೆಟ್ಟು ಚಕ್ರತೀರ್ಥ ರಸ್ತೆ ಬದಿಯಲ್ಲಿಯೇ ಕಸ ಎಸೆಯುವ, ಮಲ್ಪೆಕಲ್ಮಾಡಿಯಲ್ಲಿ ವಾಕಿಂಗ್ ಸಮಯದಲ್ಲಿ ನಾಯಿ ಹಾವಳಿ, ಬೈಂದೂರುಶೋ ರೂಂನಲ್ಲಿಯೇ ದ್ವಿಚಕ್ರ ವಾಹನಗಳಿಗೆ ಪ್ರಖರ ಬೆಳಕಿನ ವ್ಯವಸ್ಥೆಯನ್ನು ಮಾಡುವ, ಹಂದಾಡಿ ಗ್ರಾಪಂ ವ್ಯಾಪ್ತಿಯ ದುರ್ಗಾ ಸಭಾಭವನದ ಬಳಿ ಚರಂಡಿಯಲ್ಲಿ ತುಂಬಿರುವ ಮಣ್ಣು ತೆರವುಗೊಳಿಸುವ ಹಾಗೂ ಉಡುಪಿ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಏಜೆಂಟರ ಹಾವಳಿ ಕುರಿತು ದೂರುಗಳು ಕೇಳಿಬಂದವು.
ಕುಂದಾಪುರ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರು ಪಯೋಗಪಡಿಸಿ ಸುಳ್ಳು ದೂರು ಹಾಕಿದ ಪರಿಣಾಮ ಸರಕಾರಿ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವುದಾಗಿ ವ್ಯಕ್ತಿಯೊಬ್ಬರು ಕರೆ ಮಾಡಿ ಅಳಲು ತೋಡಿಕೊಂಡರು. ಶಂಕರನಾರಾಯಣ-ಸಿದ್ದಾಪುರ ಸರಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ನಿಲುಗಡೆ ಮಾಡಬಾರದೆಂದು ಜಿಲ್ಲಾಧಿಕಾರಿ ಆದೇಶ ಹೊರಡಿ ಸಿದರೂ ಅದರ ಪಾಲನೆ ಆಗುತ್ತಿಲ್ಲ ಎಂಬ ದೂರಿಗೆ ಸ್ಪಂದಿಸಿದ ಎಸ್ಪಿ, ಈ ಬಗ್ಗೆ ಪಿಡಿಓ ಠಾಣೆಗೆ ಬಂದು ದೂರು ನೀಡಿದರೆ ಅಗತ್ಯ ಭದ್ರತೆುನ್ನು ನೀಡಲಾಗು ವುದು ಎಂದರು.
ಬ್ರಹ್ಮಾವರದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಪತಿಯ ಪ್ರಕರಣದ ಮಾಹಿತಿಯನ್ನು ನೀಡುವಂತೆ ಪತ್ನಿ ಎಸ್ಪಿಗೆ ಕರೆ ಮಾಡಿ ಮನವಿ ಮಾಡಿದರು. ಉಡುಪಿ ಶೋರೂಮ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೆಕ್ಯೂರಿಟಿ ಗಾರ್ಡ್‌ಗೆ ಕಾಯಿಲೆ ಇದೆ ಎಂಬುದಾಗಿ ಅಪಪ್ರಚಾರ ಮಾಡಿ ಕೆಲಸದಿಂದ ತೆಗೆದು ಹಾಕುವ ಹುನ್ನಾರ ನಡೆಸಲಾುತ್ತಿದೆ ಎಂಬ ದೂರುಗಳು ಬಂದವು.
ಕರ್ಕಶ ಹಾರ್ನ್: 405 ಪ್ರಕರಣ ದಾಖಲು
ಕರ್ಕಶ ಹಾರ್ನ್ ವಿರುದ್ಧ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ಖಾಸಗಿ ಬಸ್‌ಗಳು ಸೇರಿದಂತೆ ಒಟ್ಟು 405 ವಾಹನಗಳ ವಿರುದ್ಧ ಸೂಕ್ತ ಕ್ರಮ ಜರಗಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.
ಈ ಸಂಬಂಧ ಉಡುಪಿ ನಗರದಲ್ಲಿ 84, ಕುಂದಾಪುರ ನಗರದಲ್ಲಿ 23 ಹಾಗೂ ಜಿಲ್ಲೆಯ ವಿವಿಧೆಡೆ 298 ಬಸ್‌ಗಳಿಗೆ ದಂಡ ವಿಧಿಸಲಾಗಿದೆ. ಅಲ್ಲದೆ ಖಾಸಗಿ ಬಸ್ ಮಾಲಕರಿಗೆ ನೋಟೀಸ್ ಜಾರಿ ಮಾಡಿ, ಕರ್ಕಶ ಹಾರ್ನ್ ಮುಂದುವರೆಸಿದರೆ ಬಸ್‌ಗಳನ್ನು ಮುಟ್ಟುಗೋಲು ಹಾಕಿ ನ್ಯಾಯಾಲಯಕ್ಕೆ ಹಾಜರುಪಡಿ ಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.
ಅದೇ ರೀತಿ 29 ಟಿಂಟ್ ಗ್ಲಾಸ್ ವಾಹನಗಳು ಹಾಗೂ ನಾಲ್ಕು ಮೀನು ಸಾಗಾಟ ಮಾಡುವ ವಾಹನಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ಒಂದು ವಾರಗಳ ಅವಧಿಯಲ್ಲಿ ಮಟ್ಕಾ ಒಂದು, ಇಸ್ಪೀಟ್ ಜುಗಾರಿ ಒಂದು (5 ಬಂಧನ), ಗಾಂಜಾ ಸೇವನೆ ಎರಡು(3 ಬಂಧನ), ಕೋಟ್ಪಾ 20, ಕುಡಿದು ವಾಹನ ಚಾಲನೆ 18, ಮೊಬೈಲ್ ಬಳಸಿ ವಾಹನ ಚಾಲನೆ 21, ಹೆಲ್ಮೆಟ್ ಧರಿಸದೆ ವಾಹನ ಚಾಲನೆ 954, ಅತಿವೇಗದ ಚಾಲನೆ 33 ಹಾಗೂ ಇತರ ಮೋಟಾರ್ ಕಾಯಿದೆಯಡಿ 1411 ಪ್ರಕರಣಗಳು ದಾಖಲಾಗಿವೆ.
ಟೋಲ್ ಗೇಟ್‌ಗೆ ಭದ್ರತೆ
ನ. 26ರಿಂದ ಜಿಲ್ಲೆಯ ವಾಹನಗಳಿಂದಲೂ ಟೋಲ್ ಸಂಗ್ರಹ ಮಾಡುವ ಬಗ್ಗೆ ನಮಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಇದು ಕೇಂದ್ರ ಸರಕಾರಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಟೋಲ್‌ಗಳಿಗೆ ಭದ್ರತೆ ಯನ್ನಷ್ಟೆ ನೀಡಲು ಸಾಧ್ಯ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.
ಟೋಲ್ ಸಂಗ್ರಹಕ್ಕೆ ಸಾರ್ವಜನಿಕರಿಂದ ತೊಂದರೆಯಾದರೆ ಅವರಿಗೆ ಭದ್ರತೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. 26ರಂದು ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ಗೇಟ್‌ಗಳಿಗೆ ಭದ್ರತೆ ನೀಡುವಂತೆ ಪತ್ರ ಬಂದರೆ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.