ಸಂಚಾರ ದಟ್ಟಣೆ ನಿಯಂತ್ರಿಸಲು ಕ್ರಮ: ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್

ಮಂಗಳೂರು, ನ.23: ನಗರದ ಅಂಬೇಡ್ಕರ್ ವೃತ್ತ, ಪಿವಿಎಸ್ ಮತ್ತಿತರ ಕಡೆ ಬೆಳಗ್ಗೆ ಮತ್ತು ಸಂಜೆ ವಾಹನ ದಟ್ಟಣೆ ಹೆಚ್ಚಿರುವ ಸಂದರ್ಭ ಆಟೋಮ್ಯಾಟಿಕ್ ವ್ಯವಸ್ಥೆಯ ಬದಲಾಗಿ ಸಂಚಾರ ಪೊಲೀಸರು ಸಿಗ್ನಲ್ ಚಾಲನೆ ಮಾಡಿ ವಾಹನ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ 95ನೇ ಫೋನ್‌ಇನ್ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು.
ಆಟೋಮ್ಯಾಟಿಕ್ ವ್ಯವಸ್ಥೆಯಲ್ಲಿ ಸಿಗ್ನಲ್‌ನ ಸಮಯಾವಧಿ ಹೆಚ್ಚಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತದೆ. ಇದನ್ನು ನಿಯಂತ್ರಿಸಲು ಪೊಲೀಸರ ಮೂಲಕ ಈ ಕ್ರಮ ಕೈಗೊಳ್ಳಲಾಗುವುದು ಎಂದು ಟಿ.ಆರ್.ಸುರೇಶ್ ಹೇಳಿದರು.
ಮಾಲೆಮಾರ್ ಹಾಗೂ ಮಾರ್ನಮಿಕಟ್ಟೆ ಪರಿಸರದಲ್ಲಿ ಪಡ್ಡೆ ಹುಡುಗರ ಸಂಖ್ಯೆ ಹೆಚ್ಚಾಗಿದ್ದು, ಮಹಿಳೆಯರು ನಡೆದುಕೊಂಡು ಹೋಗಲು ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಟಿ.ಆರ್. ಸುರೇಶ್ ಈ ಪ್ರದೇಶದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಮುಲ್ಕಿಯಲ್ಲಿ ಗ್ಯಾಸ್ ವಿತರಕರು ಹೆಚ್ಚು ಶುಲ್ಕ ವಿಧಿಸುತ್ತಾರೆ ಎಂಬ ಸಾರ್ವಜನಿಕರೊಬ್ಬರ ದೂರಿಗೆ ಪ್ರತಿಕ್ರಿಯಿಸಿದ ಆಯುಕ್ತರು ಗ್ಯಾಸ್ ಏಜೆನ್ಸಿಯ ಹೊರಗಡೆ ಕಂಪೆನಿಯ ದೂರವಾಣಿ ಸಂಖ್ಯೆ ಇರುತ್ತದೆ. ಕರೆ ಮಾಡಿ ದೂರು ನೀಡಬಹುದು ಎಂದು ಸಲಹೆ ನೀಡಿದರು.
ಕುದ್ರೋಳಿ ರಸ್ತೆಯಲ್ಲಿ ಮೀನು ಹಾಗೂ ಕಸ ಸಾಗಾಟದ ಲಾರಿಗಳು ರಸ್ತೆಯಲ್ಲಿ ತ್ಯಾಜ್ಯನೀರು ಚೆಲ್ಲುತ್ತಾ ಸಾಗುತ್ತವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವ ಜನಿಕರೊಬ್ಬರು ಒತ್ತಾಯಿಸಿದರು. ಕಂಕನಾಡಿ, ಬಲ್ಮಠ ಮತ್ತಿತರ ಕಡೆ ಫುಟ್‌ಪಾತ್‌ನಲ್ಲೇ ವಾಹನ ಪಾರ್ಕಿಂಗ್ ಮಾಡಲಾಗುತ್ತದೆ. ಇದರಿಂದ ಪಾದಚಾರಿ ಗಳಿಗೆ ತೊಂದರೆಯಾಗುತ್ತಿದೆ. ಫಳ್ನೀರ್‌ನಲ್ಲಿ ಕಟ್ಟಡ ಕಾಮಗಾರಿಗೆ ಫುಟ್‌ಪಾತ್ ಮೇಲೆ ಕಲ್ಲು, ಜಲ್ಲಿ ತಂದು ಹಾಕಿದ್ದಾರೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದರು.
ಈ ಸಂದರ್ಭ ಡಿಸಿಪಿ ಹನುಮಂತರಾಯ, ಎಸಿಪಿ ಎಂ.ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್ ಗುರು ಕಾಮತ್, ಶಿವಪ್ರಕಾಶ್ ಉಪಸ್ಥಿತರಿದ್ದರು.