ಚಂಡಮಾರುತದ ಸಂತ್ರಸ್ತರಿಗೆ ಪರಿಹಾರ ನೀಡಲು ಎಸ್‌ಡಿಪಿಐ ಒತ್ತಾಯ
ಮಂಗಳೂರು, ನ. 23: ತಮಿಳುನಾಡಿಗೆ ಅಪ್ಪಳಿಸಿದ ಗಾಜಾ ಚಂಡಮಾರುತದಿಂದ 50 ಮಂದಿ ಮೃತಪಟ್ಟಿರುವುದಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ, ಹಾನಿಗೊಳಗಾದವರಿಗೆ ತಮಿಳುನಾಡು ಸರಕಾರ ನೀಡಿರುವ ಪರಿಹಾರ ಸಮರ್ಪಕವಾಗಿಲ್ಲ. ದುರಂತದ ಸಂದರ್ಭ ಮೃತಪಟ್ಟವರ ಕುಟುಂಬದವರಿಗೆ 10 ಲಕ್ಷ ರೂ. ಬದಲು 25 ಲಕ್ಷ ರೂ. ಪರಿಹಾರ ನೀಡಬೇಕು. ಅದೇ ರೀತಿ ತೀವ್ರವಾಗಿ ಗಾಯಗೊಂಡವರಿಗೆ 1 ಲಕ್ಷ ರೂ. ಬದಲು 5 ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ 25 ಸಾವಿರ ರೂ. ಬದಲು 1 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಚಂಡಮಾರುತದಿಂದ ಹಾಳಿಗೊಳಗಾದ 7 ಜಿಲ್ಲೆಗಳಲ್ಲಿ ಅಗತ್ಯ ಸೇವೆಗಳನ್ನು ಪುನಃ ಸ್ಥಾಪಿಸಲು ಕೇಂದ್ರ ಸರಕಾರ ತಕ್ಷಣ ಮಧ್ಯಪ್ರವೇಶಿಸಿ ಸಹಾಯ ಹಸ್ತ ಚಾಚಬೇಕು. ಕೇರಳದಲ್ಲಿ ಈ ವರ್ಷದ ಆರಂಭದಲ್ಲಿ ಭೀಕರ ಪ್ರವಾಹ ಉಂಟಾಗಿ ಅಪಾರ ಸಾವು ನೋವು ಸಂಭವಿಸಿದ ಸಂದರ್ಭ ಮೋದಿ ಸರಕಾರ ತಳೆದ ದ್ವಂದ್ವ ನಿಲುವಿನಂತೆ ಈ ಸಂದರ್ಭದಲ್ಲಿ ನಡೆದುಕೊಳ್ಳಬಾರದು ಎಂದು ಎಂ.ಕೆ.ಫೈಝಿ ಒತ್ತಾಯಿಸಿದ್ದಾರೆ.
Next Story