ರಾಮಮಂದಿರಕ್ಕಾಗಿ ಜಂಟಿ ಸದನ ಸಭೆಯಲ್ಲಿ ಮಸೂದೆ ಜಾರಿಗೆ ತರಲಿ: ಪೇಜಾವರ ಶ್ರೀ
ಉಡುಪಿ, ನ.23: ರಾಮ ಮಂದಿರ ವಿಚಾರದಲ್ಲಿ ನ್ಯಾಯಾಲಯ ಶೀಘ್ರವೇ ತೀರ್ಮಾನ ಮಾಡಬೇಕಾಗಿತ್ತು. ಆದರೆ ಅದು ಮಾಡುತ್ತಿಲ್ಲ. ಹಾಗಾಗಿ ನಮಗೆ ನ್ಯಾಯಾಲಯವನ್ನು ಕಾಯಲು ಸಾಧ್ಯವಿಲ್ಲ. ಆದುದರಿಂದ ನ್ಯಾಯಾಲಯದ ಹೊರಗೆ ಸಂಧಾನ ಅಥವಾ ಮಸೂದೆ ಅಥವಾ ಸುಗ್ರಿವಾಜ್ಞೆ ಮೂಲಕ ಈ ವರ್ಷವೇ ಮಂದಿರ ಕಾರ್ಯ ಆರಂಭಿಸಬೇಕು ಎಂದು ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಜಪೇಯಿ ಸರಕಾರಕ್ಕೆ ಬಹುಮತ ಇಲ್ಲದ ಕಾರಣ ಆಗ ರಾಮ ಮಂದಿರ ನಿರ್ಮಾಣ ಮಾಡಲು ಸಾಧ್ಯ ಇರಲಿಲ್ಲ. ಆದರೆ ಈಗ ಬಹುಮತ ಇದೆ. ಆದುದರಿಂದ ಪ್ರಧಾನ ಮಂತ್ರಿಗಳು ಮನಸ್ಸು ಮಾಡಿ ಮಸೂದೆ ಅಥವಾ ಸುಗ್ರಿವಾಜ್ಞೆ ಹೊರಡಿಸಿ ರಾಮಮಂದಿರ ನಿರ್ಮಿಸಬೇಕು. ಲೋಕಸಭೆ ಹಾಗೂ ರಾಜ್ಯಸಭೆ ಜಂಟಿ ಸಭೆ ಕರೆದು ಆ ಮೂಲಕ ಬಹುಮತ ಪಡೆದು ಮಸೂದೆ ಜಾರಿಗೆ ತರಬೇಕು ಎಂದರು.
ರಾಮ ಮಂದಿರ ವಿಚಾರದಲ್ಲಿ ವಿರೋಧ ಪಕ್ಷದವರಿಗೆ ಏನು ಮಾಡಲು ಆಗುವುದಿಲ್ಲ. ನ್ಯಾಯಾಲಯಕ್ಕೆ ಹೋದರೂ ನ್ಯಾಯಾಲಯದಿಂದ ವಿರೋಧ ವಾದ ತೀರ್ಪು ಬರಲಿಕ್ಕಿಲ್ಲ. ಆದುದರಿಂದ ಸುಗ್ರಿವಾಜ್ಞೆ ಮಾಡಲು ಅವಕಾಶ ಇದೆ ಎಂದು ಅನೇಕ ಮಾಜಿ ಅಡ್ವಕೇಟ್ ಜನರಲ್‌ಗಳು ಸಲಹೆ ನೀಡಿದ್ದಾರೆ. ಸುಗ್ರಿವಾಜ್ಞೆ ಮಾಡಲು ಕಾನೂನು ಪ್ರಕಾರ ಅವಕಾಶ ಇದೆ ಎಂದು ಸಂವಿಧಾನ ತಜ್ಞರು, ಹೈಕೋರ್ಟ್ ನ್ಯಾಯಾಧೀಶರು ಕೂಡ ಹೇಳಿದ್ದಾರೆ. ಕೇಂದ್ರ ಸರಕಾರ ದೃಢ ನಿರ್ಧಾರ ಮಾಡಿ ಕ್ರಮ ಕೈಗೊಳ್ಳೇಕು ಎಂದು ಅವರು ಆಗ್ರಹಿಸಿದರು.
ವಿರೋಧಿಸಿದರೆ ಕಾಂಗ್ರೆಸ್‌ಗೆ ಹಾನಿ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಈ ವಿಚಾರದಲ್ಲಿ ಕೇಂದ್ರ ಸರಕಾರ ಪತನವಾದರೂ ಅದರಿಂದ ಸರಕಾರಕ್ಕೆ ಹೆಚ್ಚು ಬಲ ಬರುತ್ತದೆ. ಮುಂದಿನ ಚುನಾವಣೆಯಲ್ಲಿ ತುಂಬಾ ಅನುಕೂಲವಾಗಲಿದೆ. ಈ ಸಂಬಂಧ ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷಕ್ಕೂ ವಿರೋಧ ಮಾಡುವ ಧೈರ್ಯ ಇಲ್ಲ. ವಿರೋಧ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಅದರ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ. ಸದ್ಯ ಕಾಂಗ್ರೆಸ್ ತಟಸ್ಥವಾಗಿ ಎಲ್ಲವನ್ನೂ ನೋಡುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಬೆಂಬಲಿಸುತ್ತಲೂ ಇಲ್ಲ, ವಿರೋಧಿಸುತ್ತಲೂ ಇಲ್ಲ ಎಂದು ಪೇಜಾವರ ಶ್ರೀ ಹೇಳಿದರು.