ಸಂತ ಅಲೋಶಿಯಸ್ ಕಾಲೇಜಿನಲ್ಲಿ ದೀಪಾವಳಿ ಸಂಭ್ರಮ

ಮಂಗಳೂರು, ನ.23: ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶಾಂತಿ-ಸಾಮರಸ್ಯ ಸಾರುವ ದೀಪಾವಳಿಯನ್ನು ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಗುರುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಣತೆಗಳನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಮುಖ್ಯಅತಿಥಿಯಾಗಿ ಭಾಗವಹಿಸಿ ಬೆಸೆಂಟ್ ಸಂಧ್ಯಾ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಎಂ.ಪ್ರಭಾಕರ ಜೋಶಿ ಮಾತನಾಡಿ, ದೀಪಾವಳಿ ಎಂದರೆ ಭ್ರಾತೃತ್ವವನ್ನು ಸಾರುವ ದೀಪಗಳ ಹಬ್ಬ. ಇದು ದೇಶಾದ್ಯಂತ ಯಾವುದೇ ಜಾತಿಮತ ಭೇದವಿಲ್ಲದೆ ಎಲ್ಲರೂ ಸರಿಸಮಾನರಾಗಿ ಆಚರಿಸುವ ಪ್ರಮುಖ ಹಬ್ಬವಾಗಿದೆ. ದೀಪವು ಯಾವುದೇ ಭೇದ ತೋರದೆ ಎಲ್ಲರಿಗೂ ಬೆಳಕು ನೀಡುವಂತೆ, ನಾವು ಕೂಡ ಒಬ್ಬರಿಗೊಬ್ಬರು ಪ್ರೀತಿ ವಿಶ್ವಾಸದಿಂದ ಇರಬೇಕು ಎಂದರು.
ದೀಪಾವಳಿ ದುಷ್ಟಸಂಹಾರದ ಸಂಕೇತ. ಹಿಂದೂ ಧರ್ಮೀಯರು ಶ್ರೀರಾಮನು ರಾವಣನನ್ನು ವಧಿಸಿ, ಜಯದೊಂದಿಗೆ ಅಯೋಧ್ಯೆಗೆ ಹಿಂದಿರುಗಿದ್ದಕ್ಕಾಗಿ ಮನೆಯಂಗಳದಲ್ಲಿ ಮಣ್ಣಿನ ಹಣತೆಯನ್ನು ಸಾಲಾಗಿ ಜೋಡಿಸಿ ದೀಪ ಹಚ್ಚಿ ಸಂಭ್ರಮಿಸುತ್ತಾರೆ. ’ತಮಸೋಮಾ ಜ್ಯೋತಿರ್ಗಮಯ’ ಎಂಬ ವೇದವಾಕ್ಯವನ್ನು ಸಾರುವ ದೀಪಾವಳಿಯು ನಮಗೆಲ್ಲರಿಗೂ ಜವಾಬ್ದಾರಿಯುತ ಶಾಂತಿ, ಸೌಹಾರ್ದ ನೆನಪಿಸುವ ಹಬ್ಬವಾಗಿದೆ ಎಂದರು.
ಡಾ.ಎ.ಎಂ. ಖಾನ್ ಮಾತನಾಡಿ, ಸಾಮರಸ್ಯವೆಂದರೆ ಆಂತರಿಕ ಶಾಂತಿ ತರುವ ಸಾಧನ. ನಾವೆಲ್ಲರೂ ಒಂದಾಗಿ ಶಾಂತಿ ಮತ್ತು ಸಾಮರಸ್ಯದಿಂದ ಬಾಳಬೇಕು. ಈ ದೀಪಾವಳಿ ಕಾರ್ಯಕ್ರಮವು ಜಾತಿ-ಮತ-ಭೇದವಿಲ್ಲದೆ ನಮ್ಮನ್ನೆಲ್ಲರನ್ನೂ ಒಂದುಗೂಡಿಸಿದೆ. ಈಗಿನ ಯುವಜನತೆ ಅಂತರ್ಜಾಲದ ಯುಗದಲ್ಲಿ ಮೊಬೈಲ್‌ನಿಂದಾಗಿ ಮನಃಶಾಂತಿ ಕಳೆದುಕೊಂಡು ಬದುಕುತ್ತಿದ್ದಾರೆ, ಹಸ್ತಲಾಘವ ಮಾಡುವ ಬದಲಾಗಿ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಸಂಬಂಧಗಳು ನಶಿಸುತ್ತಿವೆ ಎಂದರು.
ರೆ.ಡಾ.ಪ್ರವೀಣ್ ಲಸ್ರಾದೊ ಸಭೆಯನ್ನುದ್ದೇಶಿಸಿ ಮಾತನಾಡಿ, ಬೆಳಕಿನ ಹಬ್ಬವೆಂದರೆ ಶಾಂತಿ, ಪ್ರೀತಿ ಮತ್ತು ಸಹೋದರತೆಯನ್ನು ಸಾರುವ ಹಬ್ಬವಾಗಿದೆ. ಮನುಷ್ಯ ಹೇಗೆ ಇತರರಿಗೆ ಬೆಳಕಾಗಬಹುದು ಮತ್ತು ಬೆಳಕನ್ನು ಪಡೆದ ಮನುಷ್ಯ ಅದನ್ನು ಹೇಗೆ ಇತರರಿಗೆ ನೀಡಬಹುದು ಎಂಬುದರ ಬಗ್ಗೆ ಸಣ್ಣ ಕತೆಗಳ ಮೂಲಕ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ರೆ.ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅಧ್ಯಕ್ಷತೆ ವಹಿಸಿದ್ದರು. ಅಪೂರ್ವ ಎಸ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಚೇತನ್ ಶೆಟ್ಟಿಗಾರ್ ಸ್ವಾಗತಿಸಿದರು. ಅನೂಪ್ ಡೆನ್ಜಿಲ್ ವೇಗಸ್ ಅತಿಥಿಗಳನ್ನು ಪರಿಚಯಿಸಿದರು. ಸುರಕ್ಷಾ ವಂದಿಸಿದರು.