ಉಡುಪಿ: ನ. 24ರಂದು ಸಿಂಡ್‌ಬ್ಯಾಂಕ್ ಆಫೀಸರ್ಸ್ ಸಮಾವೇಶ
ಉಡುಪಿ, ನ.23: ಸಿಂಡಿಕೇಟ್ ಬ್ಯಾಂಕ್ ಆಫೀಸರ್ಸ್ ಸಂಘಟನೆಯ ಎರಡು ದಿನಗಳ 15ನೇ ದ್ವೈವಾರ್ಷಿಕ ಸಮಾವೇಶ ಉಡುಪಿಯ ಹೊಟೇಲ್ ದುರ್ಗಾ ಇಂಟರ್‌ನೇಷನಲ್‌ನಲ್ಲಿ ನ.24ರಂದು ಆರಂಭಗೊಳ್ಳಲಿದೆ ಎಂದು ಸಂಘಟನೆಯ ಮಾಜಿ ಅಧ್ಯಕ್ಷ ಮಂಜುನಾಥ ಎಸ್.ಭಾಗ್ವತ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಅಂದು ಸಂಜೆ 5 ಗಂಟೆಗೆ ಉಡುಪಿಯ ಸಂಸದೆ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಲಿದ್ದಾರೆ. ಶಾಸಕ ಕೆ.ರಘುಪತಿ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಬ್ಯಾಂಕ್ ಆಫೀಸರ್ಸ್‌ಗಳ ರಾಷ್ಟ್ರೀಯ ಸಂಘಟನೆ (ಎನ್‌ಒಬಿಒ)ಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ವಿ.ವಿ.ಟಿಕ್ಕೇಕರ್ ಅವರು ನ.25ರ ರವಿವಾರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಭಾಗ್ವತ್ ನುಡಿದರು. 1977ರಲ್ಲಿ ಪ್ರಾರಂಭಗೊಂಡ ಈ ಸಂಘಟನೆ, ಎನ್‌ಒಬಿಒನ ಮಾನ್ಯತೆಯನ್ನು ಪಡೆದಿದ್ದು, ಎಲ್ಲಾ ರಾಜ್ಯ ಹಾಗೂ ವಲಯಗಳಲ್ಲೂ ಪ್ರಾತಿನಿಧಿತ್ವವನ್ನು ಹೊಂದಿದೆ ಎಂದರು.
ಬ್ಯಾಂಕ್ ನೌಕರರು ಇಂದು ಅನೇಕ ಸಮಸ್ಯೆಗಳಿಗೆ ತುತ್ತಾಗುತಿದ್ದಾರೆ. ಅದರಲ್ಲೂ ಅಧಿಕಾರಿ ವರ್ಗದವರ ಮಟ್ಟಿಗೆ ಕೆಲಸದ ವಾತಾವರಣ ಅತ್ಯಂತ ಹದಗೆಟ್ಟಿದೆ. ಅದರಲ್ಲೂ ಸಿಂಡಿಕೇಟ್ ಬ್ಯಾಂಕ್ ಮಟ್ಟಿಗೆ ಅಧಿಕಾರಿಗಳು ದಿನವಿಡೀ ಕೆಲಸ ಮಾಡುವ ಅನಿವಾರ್ಯತೆ ಉಂಟಾಗಿದೆ. ಯಾರೊಬ್ಬರೂ ಯಾವುದೇ ವ್ಯಾವಹಾರಿಕ ನಿರ್ಧಾರ ತೆಗೆದುಕೊಳ್ಳಲು ಹೆದರುವ ಸ್ಥಿತಿ ಇದೆ. ಅದರಲ್ಲೂ ಶಾಖಾ ಮ್ಯಾನೇಜರ್‌ಗಳು ಭ್ರಮನಿರಸನಗೊಂಡಿದ್ದಾರೆ ಎಂದರು.
ಇದೇ ವೇಳೆ ಸಿಂಡಿಕೇಟ್ ಬ್ಯಾಂಕ್ ಆಡಳಿತ, ಬ್ಯಾಂಕ್‌ನ ಆಡಳಿತ ಕಚೇರಿಯನ್ನು ಮರ್ಚ್-ಎಪ್ರಿಲ್ ಸುಮಾರಿಗೆ ಬೆಂಗಳೂರಿಗೆ ವರ್ಗಾಯಿಸಲು ಮುಂದಾ ಗಿದ್ದು, ಇದನ್ನು ಅಧಿಕಾರಿಗಳು ಹಾಗೂ ನೌಕರರೆಲ್ಲರೂ ಒಕ್ಕೊರಲಿ ನಿಂದ ವಿರೋಧಿಸುತಿದ್ದಾರೆ ಎಂದರು. ಉಡುಪಿಯಲ್ಲೇ ಹುಟ್ಟಿ ಬೆಳೆದ ಬ್ಯಾಂಕ್ ನ ಪ್ರಧಾನ ಕಚೇರಿ ಇಲ್ಲೇ ಉಳಿಯಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಬ್ಯಾಂಕ್ ಈಗಾಗಲೇ ನಷ್ಟದಲ್ಲಿದ್ದು, ಇದರ ಹೊರತಾಗಿಯೂ ಕೋಟ್ಯಾಂತರ ರೂ.ಹೆಚ್ಚುವರಿ ವೆಚ್ಚದ ಈ ವರ್ಗಾವಣೆ ಬ್ಯಾಂಕಿಗೆ ಇನ್ನಷ್ಟು ಹೊರೆಯಾಗಲಿದೆ. ಬ್ಯಾಂಕಿನ ಎಲ್ಲಾ ವಿಭಾಗಗಳೂ ಬೆಂಗಳೂರಿಗೆ ವರ್ಗಾವಣೆಗೊಳ್ಳುವುದರಿಂದ ಇಲ್ಲಿನ 500ಕ್ಕೂ ಅಧಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಲ್ಲಿಗೆ ತೆರಳ ಬೇಕಿದ್ದು, ಇದರ ಅನಗತ್ಯ ಹೊರೆಯಾಗಲಿದೆ ಎಂದು ಮಂಜುನಾಥ ಭಾಗ್ವತ್ ನುಡಿದರು.
ಈ ನಡುವೆ ಕೇಂದ್ರ ಸರಕಾರ ಬ್ಯಾಂಕುಗಳ ವಿಲೀನಕ್ಕೆ ಮುಂದಾಗುವ ಸಾಧ್ಯತೆ ಇದ್ದು, ಹೀಗಾದರೆ ಸಿಂಡಿಕೇಟ್ ಬ್ಯಾಂಕಿನ ಪ್ರಧಾನ ಕಚೇರಿಯ ವರ್ಗಾವಣೆ ವ್ಯರ್ಥ ಖರ್ಚು ಎನಿಸಿಕೊಳ್ಳಲಿದೆ. ಈ ಎಲ್ಲಾ ವಿಷಯಗಳೊಂದಿಗೆ ಬ್ಯಾಂಕುಗಳು ಈಗ ಎದುರಿಸುತ್ತಿರುವ ಅನುತ್ಪಾದಕ ಆಸ್ತಿ (ಎನ್‌ಪಿಎ) ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ದೇಶಾದ್ಯಂತದಿಂದ ಸುಮಾರು 200 ಮಂದಿ ಭಾಗವಹಿಸುವ ಎರಡು ದಿನಗಳ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಕೆ.ಪಿ.ವಿಶ್ವನಾಥನ್, ಪ್ರಧಾನ ಕಾರ್ಯದರ್ಶಿ ಅರುಣ್ ಎಂ.ಐ., ಕೋಶಾಧಿಕಾರಿ ಶಂಕರ್ ಭಟ್, ಕಾರ್ಯದರ್ಶಿ ಆದರ್ಶ್ ಕೆ.ಎನ್.ಉಪಸ್ಥಿತರಿದ್ದರು.