ಮೂಡುಬಿದಿರೆ: 79ನೇ ಅಖಿಲ ಭಾರತ ಅಥ್ಲೆಟಿಕ್ಸ್

ಮೂಡುಬಿದಿರೆ, ನ. 23: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಶನಿವಾರ ದಿಂದ ನ.28ರವರೆಗೆ ನಡೆಯಲಿರುವ ಅಖಿಲ ಭಾರತ 79ನೇ ಅಖಿಲ ಭಾರತ ಅಥ್ಲೆಟಿಕ್ಸ್ ಕ್ರೀಡಾಕೂಟವು ಸ್ವರಾಜ್ಯ ಮೈದಾನದಲ್ಲಿ ಉದ್ಘಾಟನೆಗೊಳ್ಳಲಿದ್ದು, ದೇಶದ 180 ವಿಶ್ವವಿದ್ಯಾಲಯದ 3,303 ಕ್ರೀಡಾಪಟುಗಳು ಮೂಡುಬಿದಿರೆಗೆ ಬಂದು ಕ್ರೀಡಾಭ್ಯಾಸದಲ್ಲಿ ತೊಡಗಿಸಿಕೊಂಡರು.
ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ವಿ.ವಿ ಮೂರನೇ ಕ್ರೀಡಾಕೂಟ ಇದಾಗಿದ್ದು, ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ಮೊದಲ ಕ್ರೀಡಾಕೂಟವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಚಾಂಪಿಯನ್ ಆಗಿ ಮೂಡಿಬಂದಿರುವ ಮಂಗಳೂರು ವಿಶ್ವವಿದ್ಯಾಲಯವು ಈ ಬಾರಿಯೂ ಹ್ಯಾಟ್ರಿಕ್ ಸಾಧನೆ ಮಾಡುವ ನಿರೀಕ್ಷೆಯಲ್ಲಿದೆ.
ಮಂಗಳೂರು ವಿ.ವಿ ತಂಡದಲ್ಲಿ ಒಟ್ಟು 80 ಮಂದಿ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಆಳ್ವಾಸ್‍ನ ಕ್ರೀಡಾಪಟುಗಳಾದ ಇಲಾಕ್ಯದಾಸನ್, ಯೂತ್ ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕ ಟ್ರಿಪಲ್ ಜಂಪ್‍ಪಟು ಪ್ರವೀಣ್ ಸಹಿತ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ಮಂಗಳೂರು ವಿ.ವಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 1 ಸಾವಿರ ಕ್ರೀಡಾ ಸಿಬ್ಬಂದಿಗಳು, ತರಬೇತುದಾರರು ಈಗಾಗಲೇ ಬಂದಿದ್ದಾರೆ. ಈ ಹಿಂದೆ ರಾಜೀವ್ ಗಾಂಧಿ ವಿ.ವಿ ಹಾಗೂ ಆಳ್ವಾಸ್ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಕ್ರೀಡಾಕೂಟಗಳು ಬಹಳ ಯಶಸ್ವಿಯಾಗಿ ನಡೆದಿತ್ತು.
ಕ್ರೀಡಾಪಟುಗಳಿಂದ ಪಥಸಂಚಲನ ನಡೆಯಲಿದ್ದು ನಂತರ ಉದ್ಘಾಟನಾ ಸಮಾರಂಭ ನಡೆಯಲಿರುವುದು ಎಂದು ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ, ಅಥ್ಲೆಟಿಕ್ ಕೂಟದ ಸಂಘಟನಾ ಕಾರ್ಯದರ್ಶಿ ಕಿಶೋರ್ ಕುಮಾರ್ ತಿಳಿಸಿದ್ದಾರೆ.