ಈ ಬಿಜೆಪಿ ಅಭ್ಯರ್ಥಿಯ ವಯಸ್ಸು 2014ರಲ್ಲಿ 73, ಈಗಲೂ 73!
![ಈ ಬಿಜೆಪಿ ಅಭ್ಯರ್ಥಿಯ ವಯಸ್ಸು 2014ರಲ್ಲಿ 73, ಈಗಲೂ 73! ಈ ಬಿಜೆಪಿ ಅಭ್ಯರ್ಥಿಯ ವಯಸ್ಸು 2014ರಲ್ಲಿ 73, ಈಗಲೂ 73!](https://www.varthabharati.in/sites/default/files/images/articles/2018/11/24/164763.jpg)
ಜೈಪುರ್, ನ.24: ಬರ್ಮೆರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಜೈಸಲ್ಮೇರ್-ಬರ್ಮೆರ್ ಕ್ಷೇತ್ರದ ಬಿಜೆಪಿ ಸಂಸದ ಕರ್ನಲ್ (ನಿವೃತ್ತ) ಸೋನಾರಾಮ್ ಚೌಧುರಿ ವಿವಾದದಲ್ಲಿ ಸಿಲುಕಿದ್ದಾರೆ. ನವೆಂಬರ್ 19ರಂದು ಸಲ್ಲಿಸಲಾದ ತಮ್ಮ ನಾಮಪತ್ರದ ಜತೆಗೆ ಲಗತ್ತಿಸಲಾದ ತಮ್ಮ ಅಫಿಡವಿಟ್ನಲ್ಲಿ ಅವರು ತಮ್ಮ ವಯಸ್ಸು 73 ಎಂದು ನಮೂದಿಸಿದ್ದಾರೆ. ಕುತೂಹಲಕಾರಿಯೆಂದರೆ 2014ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವೇಳೆ ಸಲ್ಲಿಸಲಾದ ಅಫಿಡವಿಟ್ ನಲ್ಲೂ ಅವರು ತಮ್ಮ ವಯಸ್ಸು 73 ಎಂದೇ ನಮೂದಿಸಿದ್ದಾರೆ. ಈ ಬಗ್ಗೆ ಚೌಧುರಿ ಇನ್ನೂ ಪ್ರತಿಕ್ರಿಯಿಸಿಲ್ಲ.
ಕಳೆದ ಲೋಕಸಭಾ ಚುನಾವಣೆಗಿಂತ ಮುಂಚೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಅವರು ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರನ್ನು ಸೋಲಿಸಿದ್ದರು. ಆಗಷ್ಟೇ ಬಿಜೆಪಿ ತೊರೆದಿದ್ದ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರಿಗೂ ಸಿಎಂ ವಸುಂಧರಾ ರಾಜೇ ಸಿಂಧಿಯಾ ಅವರಿಗೂ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಂದಾಗಿ ಸಿಂಗ್ ವಿರುದ್ಧ ಸ್ಪರ್ಧಿಸಲು ಚೌಧುರಿ ಸರಿಯಾದ ಅಭ್ಯರ್ಥಿಯೆಂದು ಅಂದುಕೊಂಡಿದ್ದ ಸಿಂಧಿಯಾ ಅವರ ಮುತುವರ್ಜಿಯಿಂದಲೇ ಸೊನಾರಾಮ್ ಬಿಜೆಪಿ ಸೇರಿದ್ದರೆಂದು ಮೂಲಗಳು ತಿಳಿಸಿವೆ.
ಸಿಂಧಿಯಾ ಕಾರ್ಯತಂತ್ರದ ಫಲವಾಗಿ ಚೌಧುರಿ ಅವರು ಜಸ್ವಂತ್ ಸಿಂಗ್ ಅವರನ್ನು ಸೋಲಿಸಲು ಸಫಲರಾಗಿದ್ದರು.