ಚುನಾವಣೆ ಬಂದಾಗ ಬಿಜೆಪಿಯಿಂದ ರಾಮ ಮಂದಿರ ವಿಚಾರ: ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್

ಮಂಗಳೂರು, ನ. 24: ದೇಶದಲ್ಲಿ ರಾಜಕಾರಣ ಮಾಡುವುದಕ್ಕಾಗಿಯೇ ರಾಮಮಂದಿರ ವಿಷಯವನ್ನು ಬಿಜೆಪಿ ಅಡಿಪಾಯ ಹಾಕಿದೆ. ಅದರ ಹೆಸರಿನಲ್ಲೇ ಹಲವು ಚುನಾವಣೆಗಳನ್ನು ಬಿಜೆಪಿ ಎದುರಿಸಿದೆ. ಪ್ರತಿ ಚುನಾವಣೆ ಬಂದಾಗ ರಾಮ ಮಂದಿರ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಮೂಡುಬಿದಿರೆ ಮತ್ತು ಮಂಜೇಶ್ವರ ಸಮೀಪದ ಉದ್ಯಾವರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಶನಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಪತ್ರಕರ್ತರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ದೇವರ ಹೆಸರಿನಲ್ಲಿ ಹಣ, ಇಟ್ಟಿಗೆ ಸಂಗ್ರಹಿಸಿ ಪಾದಯಾತ್ರೆಯನ್ನೂ ಮಾಡಿದ್ದಾರೆ. ಆದರೆ ರಾಮ ಮಂದಿರ ಮಾತ್ರ ಆಗಿಲ್ಲ. ಪ್ರತಿ ಚುನಾವಣೆ ಸಂದರ್ಭದಲ್ಲೂ ರಾಮಮಂದಿರ ವಿಷಯವನ್ನು ಬಿಜೆಪಿಯವರು ತೆಗೆಯುತ್ತಾರೆ. ರಾಜಕೀಯ ಮಾಡುವುದಕ್ಕಾಗಿಯೇ ಅವರು ಇದನ್ನು ಮಾಡುತ್ತಿರುವುದು ಎಂದು ದೇಶದ ಜನರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಅದಕ್ಕೆ ತಕ್ಕ ಉತ್ತರವನ್ನು ದೇಶದ ಜನ 2019ರಲ್ಲಿ ನೀಡಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ, ಪಕ್ಷದ ಮುಖಂಡರಾದ ಕಣಚೂರು ಮೋನು, ಪಿ.ವಿ.ಮೋಹನ್, ಟಿ.ಎಂ.ಶಹೀದ್ ಮತ್ತಿತರರು ಉಪಸ್ಥಿತರಿದ್ದರು.