ತಾಮ್ರ ಮಾನವನ ದೇಹ್ಕೆ ಅತ್ಯವಶ್ಯಕ: ಸುವರ್ಣ ಹೆಬ್ಬಾರ್
ಪಾಕಪಾತ್ರೆಗಳ ಪುನಶ್ಚೇತನ ‘ಪಾತ್ರ’ ಕಾರ್ಯಾಗಾರ ಉದ್ಘಾಟನೆ

ಉಡುಪಿ, ನ. 24: ಮಾನವನ ದೇಹಕ್ಕೆ ಪ್ರತಿದಿನ 0.9 ಮಿಲಿ ಗ್ರಾಂನಷ್ಟು ತಾಮ್ರ ಬೇಕಾಗುತ್ತದೆ. ಆಹಾರ ಬೇಯಿಸುವ ತಾಮ್ರದ ಪಾತ್ರೆ ಅಥವಾ ಕಾಳು ಗಳಿಂದ ನಾವು ಅದರ ಅಂಶವನ್ನು ದೇಹಕ್ಕೆ ಪಡೆದುಕೊಳ್ಳುತ್ತೇವೆ. ಸರಿಯಾದ ಪ್ರಮಾಣದಲ್ಲಿ ತಾಮ್ರವನ್ನು ಸೇವಿಸುವುದರಿಂದ ಆರೋಗ್ಯವಾಗಿರಲು ಸಾಧ್ಯ ಎಂದು ಮಣಿಪಾಲ ಕೆಎಂಸಿಯ ನ್ಯೂಟ್ರಿಶನ್ ಮತ್ತು ಡಯೇಟಿಕ್ಸ್ ವಿಭಾಗದ ಮುಖ್ಯಸ್ಥೆ ಡಾ.ಸುವರ್ಣ ಹೆಬ್ಬಾರ್ ಹೇಳಿದ್ದಾರೆ.
ಉಡುಪಿ ಅದಮಾರು ಮಠದ ಶ್ರೀ ಆನಂದ ಸಮಿತಿಯ ವತಿಯಿಂದ ಮಠ ದಲ್ಲಿ ಶನಿವಾರ ನಡೆದ ಮೂರು ದಿನಗಳ ಪಾಕಪಾತ್ರೆಗಳ ಪುನಶ್ಚೇತನ ‘ಪಾತ್ರ’ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ತಾಮ್ರವೂ ಸ್ಟೀಲ್‌ಪಾತ್ರೆಗಳಿಂತ 20 ಪಟ್ಟು ಹೆಚ್ಚು ಬಿಸಿಯಾಗುತ್ತದೆ. ಅದಕ್ಕಾಗಿ ಅದನ್ನು ಕಲಾಯಿ ಹಾಕಿ ಬಳಕೆ ಮಾಡಲಾಗುತ್ತದೆ.ಮಾಂಸಾಹಾರದಲ್ಲಿ ತಾಮ್ರದ ಪ್ರಮಾಣ ಜಾಸ್ತಿ ಇದ್ದರೆ ಸಸ್ಯಾಹಾರದಲ್ಲಿ ಅದರ ಪ್ರಮಾಣ ಕಡಿಮೆ ಇರುತ್ತದೆ. ಅದಕ್ಕಾಗಿ ಸಸ್ಯಾಹಾರಿಗಳು ಹೆಚ್ಚಾಗಿ ತಾಮ್ರದ ಪಾತ್ರೆಗಳನ್ನು ಬಳಕೆ ಮಾಡುತ್ತಾರೆ ಎಂದರು.
ತಾಮ್ರದ ಅಂಶ ದೇಹದಲ್ಲಿ ಜಾಸ್ತಿಯಾದರೆ ಲೀವರ್‌ಗೆ ತುಂಬಾ ಪರಿಣಾಮ ಬೀರುತ್ತದೆ. ಅದೇ ರೀತಿ ತಾಮ್ರ ಅಂಶ ಕಡಿಮೆಯಾದರೆ ಎಲುಬುಗಳು ಸವೆಯುತ್ತವೆ. ಈಗಾಗಿ ತಾಮ್ರವು ನಮ್ಮ ದೇಹಕ್ಕೆ ಬಹಳಷ್ಟು ಅವಶ್ಯಕವಾಗಿದೆ. ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದರೆ ತಾಮ್ರವೂ ಕಡಿಮೆಯಾಗುತ್ತದೆ. ಇದು ಒಂದಕ್ಕೊಂದು ಸಂಬಂಧ ಹೊಂದಿದೆ ಎಂದು ಅವರು ತಿಳಿಸಿದರು.
ನಮ್ಮ ಶಿಸ್ತುಬದ್ಧವಾದ ದೇಹವನ್ನು ಸರಿಯಾದ ಆಹಾರವನ್ನು ಸೇವಿಸದೆ ನಾವೇ ಹಾಳು ಮಾಡುತ್ತಿದ್ದೇವೆ. ಆ ಶಿಸ್ತನ್ನು ಅನುನರಿಸಿದರೆ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು. ಕಾರ್ಯಕ್ರಮವನ್ನು ಅದಮಾರು ಹಿರಿಯ ಮಠಾಧೀಶ ಶ್ರೀವಿಶ್ವ ಪ್ರಿಯತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಠದ ಕಿರಿಯ ಯತಿ ಶ್ರೀಈಶ ಪ್ರಿಯತೀರ್ ಸ್ವಾಮೀಜಿ ವಹಿಸಿದ್ದರು.
ಡಾ.ಶ್ರೀಧರ ಬಾಯರಿ ವಿಶೇಷ ಉಪನ್ಯಾಸ ನೀಡಿ, ಪಾತ್ರೆಗಳು ಹಾಗೂ ಅದನ್ನು ಉಪಯೋಗಿಸುವ ಕುರಿತು ಸರಿಯಾದ ಜ್ಞಾನ ಹೊಂದಿರಬೇಕು. ಪಾಕ ಎಂಬುದು ಬಹಳ ದೊಡ್ಡ ವಿಜ್ಞಾನವಾಗಿದೆ. ಅದನ್ನು ಪ್ರತಿಯೊಬ್ಬರು ಅರಿತು ಕೊಳ್ಳಬೇಕಾಗಿದೆ ಎಂದು ಹೇಳಿದರು.
ಉಡುಪಿಯ ಪಾಕಶಾಸ್ತ್ರಜ್ಞ ವಿಷ್ಣುಮೂರ್ತಿ ಭಟ್ ಪಾತ್ರ ಪರಿಚಯ ಮಾಡಿ ದರು. ಉದ್ಯಮಿ ವೆಂಕಟರಮಣ ಸೋಮಯಾಜಿ ಉಪಸ್ಥಿತರಿದ್ದರು. ತರಬೇತು ದಾರರಾದ ಪೀಟರ್ ಡಿಸೋಜ ಅಂಬಾಗಿಲು, ಶ್ರೀಕಾಂತ್ ಆಚಾರ್ಯ ಬಾರಕೂರು, ಸಿಪ್ರಿಯನ್ ಡಿಸಿಲ್ವ ಬಾರಕೂರು ಅವರನ್ನು ಗೌರವಿಸಲಾಯಿತು.
ಗೋವಿಂದರಾಜ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ತರಬೇತು ದಾರರು ತಾಮ್ರ ಪಾತ್ರೆಗಳ ರಿಪೇರಿ, ಕಲಾಯಿ ಮತ್ತು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.