ಮಂಗಳೂರು: ಬ್ಯಾರಿ ಭಾಷಾ ಕಲಾವಿದರ ಸಮಾವೇಶ

ಮಂಗಳೂರು, ನ.24: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಬ್ಯಾರಿ ಕಲಾರಂಗ ಮಂಗಳೂರು ಇದರ ಸಹಕಾರದೊಂದಿಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ಬ್ಯಾರಿ ಭಾಷಾ ಕಲಾವಿದರ ಸಮಾವೇಶ, ಬ್ಯಾರಿ ಒಪ್ಪನೆ-ಕೋಲ್‌ಕಲಿ ಸ್ಪರ್ಧೆಯು ಜರುಗಿತು.
ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಭಾಷೆ, ಸಂಸ್ಕೃತಿಯ ಪ್ರಗತಿಗೆ ದುಡಿಯುತ್ತಿರುವ ಅಕಾಡಮಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರಲ್ಲದೆ, ಬ್ಯಾರಿ ಭಾಷೆಯ ಜಾನಪದ, ನಾಟಕ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಮತ್ತು ಕಲಾವಿದರನ್ನು ಪೋತ್ಸಾಹಿಸುವ ನಿಟ್ಟಿನಲ್ಲಿ ನಾನು ಕೂಡಾ ಬ್ಯಾರಿ ಭಾಷೆ ಕಲಿಯಲಿದ್ದೇನೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಬ್ಯಾರಿ-ಕೊಂಕಣಿ-ತುಳು ಭಾಷೆ ಬೇರೆಯಾದರೂ ಪರಸ್ಪರ ಅನ್ಯೋನ್ಯತೆಯಿಂದಿದೆ. ಹಾಗಾಗಿ ಮೂರೂ ಅಕಾಡಮಿಗಳು ಜತೆಯಾಗಿ ಕೆಲಸ ಮಾಡಬೇಕು ಎಂದರು.
ಅಕಾಡಮಿಯ ಅಧ್ಯಕ್ಷ ಕರಂಬಾರು ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಮುಡಾ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಹೈದರ್ ಪರ್ತಿಪ್ಪಾಡಿ, ಅಹ್ಮದ್ ಬಾವ ಬಜಾಲ್, ಸಿ.ಎಂ. ಮುಸ್ತಫಾ, ಇಸ್ಮಾಯೀಲ್ ಮೂಡುಶೆಡ್ಡೆ, ನಟ ಪ್ರಾಣೇಶ್ ಶೆಟ್ಟಿ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಮುಹಮ್ಮದ್ ಇಮ್ತಿಯಾಝ್, ಅಕಾಡಮಿಯ ಸದಸ್ಯರಾದ ಹಸನಬ್ಬ ಮೂಡುಬಿದಿರೆ, ಅಬ್ದುರ್ರಹ್ಮಾನ್ ಕುತ್ತೆತ್ತೂರು, ಆಯಿಶಾ ಯು.ಕೆ., ಮರಿಯಂ ಇಸ್ಮಾಯೀಲ್, ಬಶೀರ್ ಕಿನ್ಯ, ಆರಿಫ್ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾರಿ ಒಪ್ಪನೆ- ಕೋಲ್ಕಲಿ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಅಬ್ದುಲ್ ಅಝೀಝ್ ಬೈಕಂಪಾಡಿ ಬಳಗದಿಂದ ಬ್ಯಾರಿ ಕಥಾ ಪ್ರಸಂಗ, ಯು.ಎಚ್.ಖಾಲಿದ್ ಉಜಿರೆ ಬಳಗದಿಂದ ‘ಅಲ್ಲಾಂಡೊ ಬಿದಿ’ ಬ್ಯಾರಿ ನಾಟಕ, ಅಬ್ದುಸ್ಸಮದ್ ಕಾಟಿಪಳ್ಳ ಬಳಗದಿಂದ ‘ಪಂಡ್-ಇಂಡ್’ ಬ್ಯಾರಿ ನಾಟಕ ಪ್ರದರ್ಶನಗೊಂಡಿತು.
ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯ ಹುಸೈನ್ ಕಾಟಿಪಳ್ಳ ಸ್ವಾಗತಿಸಿದರು. ಬ್ಯಾರಿ ಕಲಾರಂಗದ ಅಧ್ಯಕ್ಷ ಅಝೀಝ್ ಬೈಕಂಪಾಡಿ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಯು.ಎಚ್. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಅಕಾಡಮಿಯ ಸದಸ್ಯ ಬಶೀರ್ ಬೈಕಂಪಾಡಿ ವಂದಿಸಿದರು.