ಅಂತರರಾಷ್ಟ್ರೀಯ ಮಟ್ಟದ ಮೀನಿಗೆ ಗಾಳ ಹಾಕುವ ಸ್ಪರ್ಧೆ: 140 ಸ್ಪರ್ಧಾಳುಗಳು ಭಾಗಿ

ಮಂಗಳೂರು, ನ. 24: ತಣ್ಣೀರುಬಾವಿ ಬ್ರೇಕ್ ವಾಟರ್ ಬಳಿ ಶನಿವಾರ ಮುಂಜಾನೆಯೇ ಸುಮಾರು ನೂರಕ್ಕೂ ಹೆಚ್ಚು ಮಂದಿ ನೆರೆದಿದ್ದರು. ನೀಲಿ ಬಣ್ಣದ ಸಮವಸ್ತ್ರ, ಕೈಯಲ್ಲಿ ಗಾಳ ಹಿಡಿದು ತವಕದಿಂದ ತಣ್ಣೀರುಬಾವಿ ಬಳಿಯ ಎನ್‌ಎಂಪಿಟಿ ಬ್ರೇಕ್ ವಾಟರ್ ಕಲ್ಲುಗಳ ಮೇಲೆ ಹೆಜ್ಜೆ ಹಾಕುತ್ತಿದ್ದರು. ಹೌದು ಇದು ಅಂತರಾಷ್ಟ್ರೀಯ ಮಟ್ಟದ ಮೀನಿಗೆ ಗಾಳ ಸ್ಪರ್ಧೆಯ ಸಂಭ್ರಮ.
ಬೆಳಗ್ಗೆಯೇ ಗಾಳ ಹಾಕಿ ಮೀನು ಹಿಡಿಯಲು ಹೊಂಚು ಹಾಕಿದ ಕೆಲವರಿಗೆ ಅದೃಷ್ಟದಿಂದ ಐದು ಕೆ.ಜಿ. ವರೆಗಿನ ಮೀನುಗಳು ಸಿಕ್ಕಿಯೇ ಬಿಟ್ಟವು. ಅದನ್ನು ತೂಗಿ ಬಳಿಕ ಆಂಗ್ಲಿಂಗ್ ನಿಯಮದಂತೆ ಪುನಃ ಸಮುದ್ರಕ್ಕೆ ಬಿಡಲಾಯಿತು.
ಇನ್ನು ಕೆಲವರು ಗಂಟೆ ಗಟ್ಟಲೆ ಕಾದರೂ ಬೃಹತ್ ಗಾತ್ರದ ಮೀನು ಸಿಗಲಿಲ್ಲ. ಆದರೂ ಜಾಗ ಬದಲಿಸಿ ಮತ್ತೆ ಮೀನು ಹಿಡಿಯುವ ಭರವಸೆಯೊಂದಿಗೆ ಗಾಳ ಹಾಕುವ ಯತ್ನ ಮುಂದುವರೆಸಿದ್ದರು. ಮಲೇಶ್ಯಾ, ಅರಬ್ ದೇಶ ಹಾಗೂ ಭಾರತದ ವಿವಿಧೆಡೆಯಿಂದ ಆಗಮಿಸಿದ ಸ್ಪರ್ಧಾಳುಗಳು ಈ ಅಂತರಾಷ್ಟ್ರೀಯ ಮೀನಿಗೆ ಗಾಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ಹಾಗೂ ನ.25ರಂದು ರವಿವಾರವೂ ಸ್ಪರ್ಧೆ ಜರಗಲಿದೆ. ಬಳಿಕ ಅತ್ಯಧಿಕ ಭಾರದ ಹಾಗೂ ಹೆಚ್ಚಿನ ಕೆಜಿ ಮೀನು ಹಿಡಿದವರಿಗೆ ಪ್ರಶಸ್ತಿ ಕೈ ಹಿಡಿಯಲಿದೆ.
‘ಮೀನಿಗೆ ಗಾಳ ಹಾಕುವ ಸ್ಪರ್ಧೆ ಎರಡು ವಿಭಾಗದಲ್ಲಿ ನಡೆಯುತ್ತಿದೆ. ಹೆಚ್ಚು ತೂಕದಲ್ಲಿ ಪ್ರಥಮ 50,000, ದ್ವಿತೀಯ 25,000, ಅತಿಹೆಚ್ಚು ಸಂಖ್ಯೆಯಲ್ಲಿ ಪ್ರಥಮ 10,000, ದ್ವಿತೀಯ 5,000 ನಗದು ಬಹುಮಾನವಿದೆ. ರವಿವಾರ ಸಂಜೆ ಬಹುಮಾನ ವಿತರಣೆ ನಡೆಯಲಿದೆ’ ಎಂದು ಸ್ಪರ್ಧೆಯ ಕೋ-ಆರ್ಡಿನೇಟರ್ ಗುರುಪ್ರಸಾದ್ ಪಡುಬಿದ್ರಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.