ನೋಟು ನಿಷೇಧ ದುಷ್ಪರಿಣಾಮ ಎಟಿಎಂಗಳ ಮುಚ್ಚುಗಡೆ: ಚಂದ್ರಶೇಖರ ಶೆಟ್ಟಿ
ಕುಂದಾಪುರ, ನ.24: ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಸದೃಢವಾಗಿದ್ದ ಈ ದೇಶದ ಆರ್ಥಿಕತೆಯು, ನರೇಂದ್ರ ಮೋದಿ ಸರಕಾರ ಮಾಡಿದ ಅವೈಜ್ಞಾನಿಕ ವಾದ ನೋಟು ನಿಷೇಧದ ದುಷ್ಪರಿಣಾಮದಿಂದ ಇದೀಗ ದೇಶದಲ್ಲಿರುವ ಅರ್ಧದಷ್ಟು ಎಟಿಎಂಗಳು ಮುಚ್ಚಲ್ಪಡುತ್ತಿವೆ ಎಂದು ಕಾಂಗ್ರೆಸ್ ಐ.ಟಿ.ಸೆಲ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಹೇಳಿದ್ದಾರೆ.
ನೋಟು ನಿಷೇಧದ ಫಲವಾಗಿ ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರ ಹಾಗೂ ಉದ್ಯಮಗಳು ನೆಲಕಚ್ಚಿವೆ. ಕಾರ್ಮಿಕರು ಉದ್ಯೋಗ ಕಳೆದು ಕೊಂಡಿದ್ದು, ದೈನಂದಿನ ಖರ್ಚುಗಳಿಗೆ ಪರದಾಡು ಪರಿಸ್ಥಿತಿ ನಿರ್ಮಾಣ ಗೊಂಡಿದೆ. ಜನ ಬ್ಯಾಂಕ್‌ನತ್ತ ಮುಖಮಾಡದಿರುವುದರಿಂದ ಬ್ಯಾಂಕ್ ವ್ಯವಹಾರ ದಾಖಲೆ ಮಟ್ಟದಲ್ಲಿ ಇಳಿಕೆ ಕಂಡಿದೆ. ಹೀಗಾಗಿ ಖರ್ಚು ವೆಚ್ಚ ಸರಿದೂಗಿಸಲು ದೇಶದಾದ್ಯಂತ ಇರುವ ವಿವಿಧ ಬ್ಯಾಂಕುಗಳ ಸುಮಾರು 2ಲಕ್ಷದ 38ಸಾವಿರ ಎಟಿಎಂಗಳಲ್ಲಿ ಸುಮಾರು 1 ಲಕ್ಷದ 13 ಸಾವಿರ ಎಟಿಎಂಗಳು ಬಾಗಿಲು ಮುಚ್ಚಲು ತಯಾರಾಗಿವೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದೆ ಆಳಿದ ಕಾಂಗ್ರೆಸ್ ಸರಕಾರಗಳು ದೇಶದ ಆರ್ಥಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉದ್ಯೋಗಾವಕಾಶವನ್ನು ಸೃಷ್ಟಿಸಿ ಹಂತ ಹಂತವಾಗಿ ಜನ ಜೀವನವನ್ನು ಉತ್ತಮಪಡಿಸಿತ್ತು. ಆದರೆ ಮೋದಿ ಸರಕಾರದ ತುಘಲಕ್ ಶೈಲಿಯ ಆಡಳಿತ ನೀತಿಯಿಂದಾಗಿ ಈಗ ದೇಶ ಕನಿಷ್ಠ 20 ವರ್ಷಗಳಷ್ಟು ಹಿಂದಕ್ಕೆ ತಳ್ಳಲ್ಪಟ್ಟಿದೆ. ಇದೊಂದು ಸ್ವತಂತ್ರ ಭಾರತದ ಅತೀ ದೊಡ್ಡ ಆರ್ಥಿಕ ಹಗರಣವಾಗಿದೆ ಎಂದು ವಿಶ್ವವಿಖ್ಯಾತ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು ಎಂದವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.