ಕೇಂದ್ರೀಯ ಪಠ್ಯಕ್ರಮದಲ್ಲಿ ಕನ್ನಡ ಭಾಷೆ ಕಲಿಸಿ: ವಿನಯ ಹೆಗ್ಡೆ
ಉಡುಪಿ ವಿದ್ಯೋದಯ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ಉಡುಪಿ, ನ.24: ಕೇಂದ್ರೀಯ ಪಠ್ಯಕ್ರಮದಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಬೇಕು. ಪ್ರಾದೇಶಿಕತೆಗೆ ಅನುಗುಣವಾಗಿ ಮಾತೃಭಾಷೆ ಯನ್ನು ಶಿಕ್ಷಣದ ಒಂದು ಭಾಗವಾಗಿ ಪರಿಗಣಿಸಬೇಕು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್.ವಿನು ಹೆಗ್ಡೆ ಹೇಳಿದ್ದಾರೆ.
ಉಡುಪಿ ಬೈಲಕೆರೆಯ ವಾದಿರಾಜ ರಸ್ತೆಯಲ್ಲಿ ವಿದ್ಯೋದಯ ಟ್ರಸ್ಟ್‌ನಿಂದ 20ಕೋಟಿ ರೂ. ವೆಚ್ಚದಲ್ಲಿ 1ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿ ರುವ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕನ್ನಡ ಭಾಷೆಯನ್ನು ಕಲಿಸಲು ಹಿಂಜರಿಕೆ ಇರಬಾರದು. ಮಾತೃಭಾಷೆಗೆ ಪೂರಕ ಶಿಕ್ಷಣದಿಂದ ಜ್ಞಾನ ಮಟ್ಟ ವೃದ್ಧಿಯಾಗುತ್ತದೆ. ಕನ್ನಡಕ್ಕೆ ಆದ್ಯತೆ ನೀಡುವಲ್ಲಿ ಶಿಕ್ಷಣ ಸಂಸ್ಥೆ ಶಿಕ್ಷಕರು ಮುತುವರ್ಜಿ ವಹಿಸಬೇಕು. ವಿದ್ಯಾರ್ಥಿಗಳ ಶ್ರೇಷ್ಠತೆ ಯನ್ನು ಕೇವಲ ಅಂಕಗಳಿಂದ ಪರಿಗಣಿಸಬಾರದು. ಮಕ್ಕಳು ಉತ್ತಮ ಮಾನವ ರಾಗವುದು ಮುಖ್ಯ ಎಂದು ಅವರು ತಿಳಿಸಿದರು.
ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮ, ಸಂಸ್ಕೃತಿ, ಭಾಷೆಯ ಬಗ್ಗೆ ಅಸಡ್ಡೆ ಸಲ್ಲದ್ದು. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಭಿಮಾನ ಹೆಚ್ಚಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು. ಶಿಕ್ಷಣ ಸಂಸ್ಥೆಗಳು ಉತ್ತಮ ಮಾದರಿಯನ್ನು ಅನುಸರಿಸಬೇಕು. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಮಾತನಾಡುವವರಿಗೆ ದಂಡ ವಿಧಿಸುವುದು ಸರಿಯಲ್ಲ ಎಂದರು.
ಅಧ್ಯಕ್ಷತೆಯನ್ನು ಮಣಿಪಾಲ ಮಾಹೆಯ ಪ್ರೊಚಾನ್ಸೆಲರ್ ಡಾ.ಎಚ್.ಎಸ್. ಬಲ್ಲಾಳ್ ವಹಿಸಿದ್ದರು. ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಂಗಳೂರು ಕರ್ಣಾಟಕ ಬ್ಯಾಂಕಿನ ಮಹಾಪ್ರಬಂಧಕ ನಾಗ ರಾಜ್ ರಾವ್ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, 250 ಆಸನ ಗಳ ಹವಾನಿಯಂತ್ರಿತ ಸಭಾಂಗಣ, ಗ್ರಂಥಾಲಯ, ಸ್ಮಾರ್ಟ್‌ಕ್ಲಾಸ್, ಕ್ಯಾಂಟಿನ್ ಗಳನ್ನು ಉದ್ಘಾಟಿಸಲಾಯಿತು.
ವಿದ್ಯೋದಯ ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ರೂಪಾ ಬಲ್ಲಾಳ್, ಟ್ರಸ್ಟಿ ರಘುರಾಮ ಆಚಾರ್ಯ, ಯು.ದಾಮೋದರ್, ಕೋಣಿ ವಾಸುದೇವ ಶೇಟ್ ಮೊದಲಾದವರು ಉಪಸ್ಥಿತರಿದ್ದರು. ಟ್ರಸ್ಟ್‌ನ ಕಾರ್ಯಾಧ್ಯಕ್ಷ ಎನ್.ನಾಗರಾಜ್ ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕೆ.ಗಣೇಶ್ ರಾವ್ ಸ್ವಾಗತಿಸಿದರು. ಕೋಶಾಧಿಕಾರಿ ಯು.ಪದ್ಮರಾಜ ಆಚಾರ್ಯ ವಂದಿಸಿ ದರು.