ಅತ್ಯಾಚಾರ ಸಂತ್ರಸ್ತೆಯ ಅತ್ಯಾಚಾರಗೈದ ಪೊಲೀಸ್ ಅಧಿಕಾರಿ: ಆರೋಪ
ಥಾಣೆ, ನ. 24: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಗೆಳೆಯನ ವಿರುದ್ಧ ದಾಖಲಿಸಲಾದ ಅತ್ಯಾಚಾರ ಪ್ರಕರಣ ಹಿಂದೆ ತೆಗೆಯಲು ಬಯಸಿದ 23 ವರ್ಷದ ಯುವತಿ ಮೇಲೆ ಪೊಲೀಸ್ ಅಧಿಕಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಭೀವಂಡಿ ತಾಲೂಕಿನ ಕೋನ್ಗಾಂವ್ ಪೊಲೀಸರು ತಿಳಿಸಿದ್ದಾರೆ.
ಯುವತಿ ಈ ಹಿಂದೆ ಮುಂಬೈಯ ಮಂಕುರ್ಡ್ ಪೊಲೀಸ್ ಠಾಣೆಯಲ್ಲಿ ಗೆಳೆಯನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಳಿಕ ಈ ಪ್ರಕರಣವನ್ನು ತನಿಖೆಗಾಗಿ ಶಾಂತಿ ನಗರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಅನಂತರ ಯುವತಿ ಆರೋಪಿ ತನ್ನ ಗೆಳೆಯನಾದುದರಿಂದ ದೂರು ಹಿಂದೆ ತೆಗೆಯಲು ಬಯಸುವುದಾಗಿ ತಿಳಿಸಿದ್ದರು. ಶಾಂತಿನಗರ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗೊಂಜಾರಿ ಗೆಳೆಯನನ್ನು ಬಿಡುಗಡೆ ಮಾಡಲಾಗುವುದು. ಆದರೆ, ಆಗಸ್ಟ್ 16ರಂದು ರಾಜ್ನೋಲಿ ಬೈಪಾಸ್ನಲ್ಲಿ ತನ್ನನ್ನು ಭೇಟಿಯಾಗಬೇಕು ಎಂದು ಹೇಳಿದ್ದರು. ಇದರಂತೆ ಯುವತಿ ಗೊಂಜಾರಿಯನ್ನು ಭೇಟಿ ಆಗಿದ್ದರು. ಅಂದು ಗೊಂಜಾರಿ ಯುವತಿಯನ್ನು ಜಿಲ್ಲೆಯ ಕಲ್ಯಾಣ್ ಪಟ್ಟಣದಲ್ಲಿರುವ ಅತಿಥಿ ಗೃಹಕ್ಕೆ ಕೊಂಡೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.