ಎಚ್‌ಕೆಆರ್‌ಡಿಬಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಿ: ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ, ನ.24: ಸರಕಾರವು ಎಚ್‌ಕೆಆರ್‌ಡಿಬಿಗೆ ಕಳೆದ ವರ್ಷದಿಂದ 1,500 ಕೋಟಿ ರೂ. ಅನುದಾನ ಒದಗಿಸಲು ವಾಗ್ದಾನ ಮಾಡಿದ್ದು, ಅದಕ್ಕನುಗುಣವಾಗಿ ಎಚ್‌ಕೆಆರ್‌ಡಿಬಿಯಿಂದ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದರು.
ನಗರದ ವಿವಿಧ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ಕಾಮಗಾರಿಗಾಗಿ ಸರಕಾರ ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷ ತಲಾ ಹದಿನೈದು ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಲು ವಾಗ್ದಾನ ಮಾಡಿದೆ. ಕಳೆದ ವರ್ಷ 1 ಸಾವಿರ ಕೋಟಿ ಬಿಡುಗಡೆಗೆ ಆದೇಶಿಸಿದೆ ಎಂದರು.
ಈಗ ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ 4 ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ನಗರದ ವರ್ಗೀಸ್ ಅಪಾರ್ಟ್‌ಮೆಂಟ್‌ನಿಂದ ಹರಿಕೃಷ್ಣ ನಗರದವರೆಗೆ ಹಾಗೂ ಎಚ್‌ಕೆಬಿ ಕಾಲನಿವರೆಗೆ ರಸ್ತೆ ಸುಧಾರಣೆ ಕಾಮಗಾರಿ, ವಾರ್ಡ್ ನಂ. 54ರ ಅರುಂಧತಿ ಕಾಲೇಜಿನ ಹಿಂಭಾಗದಿಂದ ಸ್ಪಾರ್ಕಲ್ ಶಾಲೆಯವರೆಗೆ ಆಂತರಿಕ ರಸ್ತೆ ಸುಧಾರಣೆ, ಡ್ರೈವರ್ ನಿರ್ಮಾಣ ಕಾಮಗಾರಿ ಹಾಗೂ ವಾರ್ಡ್ ನಂ. 48ರ ಹನುಮಾನ್ ತಾಂಡಾ ರಸ್ತೆ ಸುಧಾರಣೆ ಹಾಗೂ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.







