ರಸ್ತೆ ಅಪಘಾತ: ಗಾಯಾಳು ಮೃತ್ಯು
ಬಂಟ್ವಾಳ, ನ. 24: ಶುಕ್ರವಾರ ಸಂಜೆ ಬಿ.ಸಿ.ರೋಡ್ ಮಿತ್ತಬೈಲು ಸಮೀಪದ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಆಟೊ ಚಾಲಕ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
ಪಲ್ಲಮಜಲು ನಿವಾಸಿ ರವೀಂದ್ರ (44) ಮೃತ ಆಟೊ ಚಾಲಕ ಎಂದು ಗುರುತಿಸಲಾಗಿದೆ.
ರವೀಂದ್ರ ಅವರು ಶುಕ್ರವಾರ ಸಂಜೆ ಬಿ.ಸಿ.ರೋಡ್ ಮಿತ್ತಬೈಲಿನ ಪೆಟ್ರೋಲ್ ಬಂಕ್ ಸಮೀಪ ಆಟೋ ನಿಲ್ಲಿಸಿ ಸಮೀಪದ ಅಂಗಡಿಗೆ ಹೋಗಿದ್ದರು. ಅಲ್ಲಿಂದ ಮರಳುವಾಗ ಮಂಗಳೂರಿನಿಂದ ಬಿ.ಸಿ.ರೋಡ್ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ರವೀಂದ್ರ ಅವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ರವೀಂದ್ರ ಅವರ ತಲೆಗೆ ಗಂಭೀರವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಾಸಲಾಗಿತ್ತು. ಆದರೆ, ಇಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ. ರವೀಂದ್ರ ಅವರು ಕೈಕಂಬ, ಪರ್ಲಿಯಾ, ಬಿ.ಸಿ.ರೋಡ್ ಪರಿಸರದಲ್ಲಿ ಆಟೋ ಚಾಲನೆ ಮಾಡುತ್ತಿದ್ದರು. ಈ ಸಂಬಂಧ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.