2011ರ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ವಿಶೇಷ ಶಾರ್ಕ್ ಪತ್ತೆ

ಮುಂಬೈ, ನ. 24: ಉತ್ತರ ಹಿಂದೂ ಮಹಾಸಾಗರದಲ್ಲಿ ಹೊಸ ಪ್ರಬೇಧದ ಆಳ ಸಮುದ್ರದ ಶಾರ್ಕ್ ಪತ್ತೆಯಾಗಿದೆ. 2011ರಲ್ಲಿ ಮಂಗಳೂರಿನಲ್ಲಿ ಹೌಂಡ್ ಶಾರ್ಕ್ ದೊರಕಿದ ಬಳಿಕ ಭಾರತದಲ್ಲಿ ಪತ್ತೆಯಾಗುತ್ತಿರುವ ಇಂತಹ ಮೊದಲ ಶಾರ್ಕ್ ಇದಾಗಿದೆ.
ಯಾವುದೇ ನಿರ್ದಿಷ್ಟ ಮಾದರಿ ಇಲ್ಲದ, ಬಣ್ಣವಿಲ್ಲದ ಪಿಗ್ಮಿ ಫಾಲ್ಸ್ ಕ್ಯಾಟ್‌ಶಾರ್ಕ್ 65 ಸೆಂಟಿಮೀಟರ್ ಉದ್ದವಿದೆ.
ಇದು ಭಾರತದ ಆಳ ನೀರಿನ ಸಾಗರ ಜೀವಿಗಳ ಪ್ರಬೇಧಗಳಿಗೆ ಹೊಸತೊಂದು ಸೇರ್ಪಡೆ ಎಂದು ಸೆಂಟರ್ ಫಾರ್ ಪಿಶರಿಸ್ ರಿಸರ್ಚ್ ಆ್ಯಂಡ್ ಇನ್‌ಸ್ಟಿಟ್ಯೂಟ್‌ನ ಮುಂಬೈ ಮೂಲದ ಕೆ.ವಿ. ಅಖಿಲೇಶ್ ಹೇಳಿದ್ದಾರೆ.
ಈ ಹೊಸ ಪ್ರಬೇಧದ ಶಾರ್ಕ್ ಭಾರತದ ನೈಋತ್ಯ ಕರಾವಳಿ ಹಾಗೂ ಶ್ರೀಲಂಕಾದ ಉತ್ತರದಲ್ಲಿ ಪತ್ತೆಯಾಗಿದೆ. ಈ ಶಾರ್ಕ್‌ನ ವೈಜ್ಞಾನಿಕ ಹೆಸರು ‘ಪ್ಲೇನೋನಾಸ್ ಇಂಡಿಕಸ್’. ಪ್ಲೇನಸ್‌ನ ಅರ್ಥ ಚಪ್ಪಟೆ, ನಾಸಸ್ ಅರ್ಥ ಮೂಗು. ಅಖಿಲೇಶ್ ಸಹಿತ ಅಮೆರಿಕ, ಜರ್ಮನಿಯ ವಿಜ್ಞಾನಿಗಳ ತಂಡ ಈ ಶಾರ್ಕ್ ಅನ್ನು ಪತ್ತೆ ಮಾಡಿದೆ. ಜರ್ಮನಿಯ ಸೆಂಕೆನ್‌ಬರ್ಗ್ ರಿಸರ್ಚ್ ಇಸ್ಸ್ಟಿಟ್ಯೂಟ್‌ನ ಸಾಗರ ಜೀವ ವೈವಿದ್ಯದ ಕುರಿತ ಸಂಶೋಧನ ಪತ್ರಿಕೆಯಲ್ಲಿ ಈ ಅಧ್ಯಯನದ ಬಗೆಗಿನ ಲೇಖನ ಪ್ರಕಟವಾಗಿದೆ.





