ಸ್ಥಳೀಯ ವಾಹನಗಳಿಗೆ ಟೋಲ್: ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಟೋಲ್‍ಗೆ ಅವಕಾಶವಿಲ್ಲ

ಪಡುಬಿದ್ರಿ, ನ. 24: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ಕಾಮಗಾರಿ ಪೂರ್ಣಗೊಳ್ಳದೆ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಾರ್ವಜನಿಕರು ಎಚ್ಚರಿಸಿದರು.
ಹೆಜಮಾಡಿ ಬಿಲ್ಲವ ಸಂಘದಲ್ಲಿ ಸಾರ್ವಜನಿಕರೊಂದಿಗೆ ಶನಿವಾರ ನಡೆದ ಪೂರ್ವಭಾವಿ ಸಭೆ ನಡೆದ ಸಭೆಯಲ್ಲಿ, ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಶೇ. 80ರಷ್ಟು ಕಾಮಗಾರಿಯಾಗಿದೆ ಎಂದು ಕಂಪೆನಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ನವಯುಗ ಕಂಪೆನಿ ತರಾತುರಿಯಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾಗಿದೆ.
201 3ರಲ್ಲಿ ಪೂರ್ಣವಾಗಬೇಕಾದ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಗಳಿಂದಾದ ಅಪಘಾತಗಳಿಂದ ನೂರಾರು ಜೀವಗಳು ಬಲಿಯಾಗಿವೆ. ಸಾವಿರಾರು ಮಂದಿ ಅಂಗ ವೈಕಲ್ಯ ಹೊಂದಿದ್ದಾರೆ. ಅವರಿಗೆ ಕಂಪೆನಿ ಪರಿಹಾರ ನೀಡಬೇಕು. ಈಗಾಗಲೇ 50ರಷ್ಟು ಸಭೆಗಳು ನಡೆದರೂ ಜ್ವಲಂತ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರಕಿಲ್ಲ. ಅಂತಹುದರಲ್ಲಿ ನವೆಂಬರ್ 28ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಟೋಲ್ ಸಂಬಂಧಿಸಿ ಸಭೆ ಕರೆದಿದ್ದರೂ, ತರಾತುರಿಯಲ್ಲಿ ಟೋಲ್ ಸಂಗ್ರಹಕ್ಕೆ ಕಂಪೆನಿ ಮುಂದಾಗಿರುವ ಕ್ರಮ ಖಂಡನೀಯ. ಟೋಲ್ ಸಂಗ್ರಹ ಆರಂಭಿಸಿದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಶೇಖರ ಹೆಜ್ಮಾಡಿ ಎಚ್ಚರಿಸಿದರು.
ಪಡುಬಿದ್ರಿಯಲ್ಲಿ ಚತುಷ್ಪಥ ರಸ್ತೆ ಸಹಿತ ಸರ್ವಿಸ್ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಎರ್ಮಾಳು ಕಲ್ಸಂಕ ಸೇತುವೆ ಆಗಿಲ್ಲ. ಹೆಜಮಾಡಿಯಲ್ಲಿ ಸ್ಕೈವಾಕ್ ನಿರ್ಮಾಣವಾಗಿಲ್ಲ ಎಂದು ಶೇಖರ ಹೆಜ್ಮಾಡಿ ದೂರಿದರು.
ಮುಲ್ಕಿ ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಮಧು ಆಚಾರ್ಯ ಮಾತನಾಡಿ, ಕೆಎ-19 ಮತ್ತು ಕೆಎ-20 ನೋಂದಣಿ ಹೊಂದಿರುವ ಹೆಜಮಾಡಿ ಟೋಲ್ ಸುತ್ತಲಿನ ಹತ್ತು ಕಿ.ಮೀ. ವ್ಯಾಪ್ತಿಯ ವಾಹನಗಳಿಗೆ ಸುಂಕ ವಿನಾಯಿತಿ ನೀಡಬೇಕು. ಎಲ್ಲಾ ತೆರಿಗೆ, ವಿಮೆ ಪಾವತಿಸುವ ಕೆಎ-20 ಪ್ರವಾಸಿ ಟ್ಯಾಕ್ಸಿಗಳಿಗೆ ಸುಂಕ ವಿನಾಯಿತಿ ನೀಡದೆ ಹೋದಲ್ಲಿ ವೈಟ್ ಬೋರ್ಡ್ ಅಳವಡಿಸಿ ಖಾಸಗಿಯಾಗಿ ಬಾಡಿಗೆ ವಸೂಲಿ ಮಾಡಬೇಕಾಗುತ್ತದೆ ಎಂದರು.
ಸಹಕಾರ ನೀಡಿ: ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಮಾತನಾಡಿ, ಟೋಲ್ ಸಂಗ್ರಹಕ್ಕೆ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹಕರಿಸುತ್ತಿಲ್ಲ ಎಂದು ನವಯುಗ ಕಂಪೆನಿ ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದು, ಸರ್ಕಾರದ ವಿರುದ್ಧ ಆರ್‍ಬಿರ್ಟೇಶನ್‍ಗೂ ಅರ್ಜಿ ಹಾಕಿದೆ. ಸರ್ಕಾರದ ನಿರ್ದೇಶನದಂತೆ ಟೋಲ್ ಸಂಗ್ರಹಕ್ಕೆ ಈಗ ಭದ್ರತೆ ಒದಗಿಸುವುದು ಪೊಲೀಸ್ ಇಲಾಖೆ ಜವಾಬ್ದಾರಿಯಾಗಿದೆ. ಈ ವಿಷಯದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಕಾಪು ವೃತ್ತನಿರೀಕ್ಷಕ ಮಹೇಶ್‍ಪ್ರಸಾದ್, ಜನರಿಗೆ ತೊಂದರೆಗಳಾಗುತ್ತಿದ್ದರೂ, ಇಲಾಖೆ ಸರ್ಕಾರದ ನಿರ್ದೇಶನವನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಇದೆ. ಇಲಾಖೆ ಕಂಡುಕೊಂಡಂತೆ ಸಾರ್ವಜನಿಕವಾಗಿ ಸಮಸ್ಯೆಗಳಿರುವುದು ತಿಳಿದಿದೆ. ನಮ್ಮ ಇತಿಮಿತಿಗಳಲ್ಲಿ ಸರಿಪಡಿಸಬಹುದಾದ ಸಮಸ್ಯೆಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮುಂದುವರಿಸಲಾಗುವುದು ಎಂದರು.
ಎರಡು ಕಡೆಗಳಲ್ಲಿ ಟೋಲ್: ಹೆಜಮಾಡಿ ಗ್ರಾಮದಲ್ಲಿ ಎರಡೆರಡು ಕಡೆ ಟೋಲ್ ಕೇಂದ್ರ ನಿರ್ಮಾಣದಿಂದ ಗ್ರಾಮ ನಾಲ್ಕು ಭಾಗಗಳಾಗಿದೆ. ಹೆಜಮಾಡಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಗಳಿಗೆ ತೆರಳುವವರಿಗೆ ಟೋಲ್ ಬರೆಯಾಗುತ್ತಿದ್ದು, ಸಂಚರಿಸಲು ತೊಂದರೆಯಾಗುತ್ತಿದೆ. ಗ್ರಾಮಕ್ಕೆ ಬರುವ ಶಾಲಾ ವಾಹನಗಳು ಟೋಲ್‍ನಿಂದ ಸಂಕಷ್ಟ ಅನುಭವಿಸುತ್ತಿವೆ ಎಂದು ಹೆಜಮಾಡಿ ಗ್ರಾಮಸ್ಥ ಶೇಷಗಿರಿ ರಾವ್ ಸಮಸ್ಯೆ ತೋಡಿಕೊಂಡರು.
ಪಡುಬಿದ್ರಿ ಠಾಣಾಧಿಕಾರಿ ಸತೀಶ್, ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಸದಸ್ಯ ಸುಧೀರ್ ಕರ್ಕೇರ, ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಕೋಟ್ಯಾನ್, ಮುಖಂಡರಾದ ನವೀನಚಂದ್ರ ಜೆ ಶೆಟ್ಟಿ, ಅಬ್ದುಲ್ ಅಜೀಜ್, ವಿಶ್ವಾಸ್ ಅಮೀನ್, ಸುಭಾಷ್ ಸಾಲ್ಯಾನ್, ರವಿ ಹೆಜ್ಮಾಡಿ, ಪಡುಬಿದ್ರಿ ಕಾರು ಚಾಲಕ-ಮಾಲಕರ ಸಂಘದ ಕಾರ್ಯದರ್ಶಿ ಮಹಮ್ಮದ್ ಕೌಸರ್ ಉಪಸ್ಥಿತರಿದ್ದರು.
ಟೋಲ್ ಸಂಗ್ರಹ ಕುರಿತಂತೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ನವೆಂಬರ್ 25ರಂದು ಪಡುಬಿದ್ರಿ ನಾರಾಯಣಗುರು ಸಭಾಭವನದಲ್ಲಿ ಉಭಯ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಭೆ ನಡೆಯಲಿದೆ ಎಂದು ಹೋರಾಟ ಸಮಿತಿ ತಿಳಿಸಿದೆ ಎಂದು ಹೋರಾಟ ಸಮಿತಿಯ ಉಪಾಧ್ಯಕ್ಷ ಗುಲಾಂ ಮೊಹಮ್ಮದ್ ಹೇಳಿದರು.