ಅಜ್ಜಂಪುರ ಕಾನ್ಸ್ಟೇಬಲ್ಗೆ ಹಲ್ಲೆ ಪ್ರಕರಣ: ಆರೋಪ ಕುರಿತು ಆಂತರಿಕ ತನಿಖೆ: ಎಸ್ಪಿ

ಪೇದೆ ಶಿವಣ್ಣ
ಚಿಕ್ಕಮಗಳೂರು, ನ.24: ಅಜ್ಜಂಪುರ ಪಿಎಸ್ಸೈ ವಿರುದ್ಧ ಕಾನ್ಸ್ಟೇಬಲ್ ಶಿವಣ್ಣರ ಪತ್ನಿ ಆಶಾ ಮಾಡಿರುವ ಆರೋಪಗಳ ಬಗ್ಗೆ ತನಗೆ ಹೆಚ್ಚು ಮಾಹಿತಿ ಇಲ್ಲ. ಆರೋಪಗಳ ಸಂಬಂಧ ಆಂತರಿಕ ತನಿಖೆ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆಯ ಬಳಿಕ ಯಾರದ್ದು ತಪ್ಪುಎಂದು ಹೇಳಬಹುದು. ಅಲ್ಲಿಯವರೆಗೂ ಏನೂ ಹೇಳಲು ಸಾಧ್ಯವಿಲ್ಲ. ಪ್ರಕರಣ ಸಂಬಂಧ ಪಿಎಸ್ಸೈ ಅವರನ್ನು ನಾಲ್ಕು ದಿನಗಳವರೆಗೆ ರಜೆಯ ಮೇಲೆ ಕಳುಹಿಸಲಾಗಿದೆ. ಪೇದೆ ಶಿವಣ್ಣ ವಿರುದ್ಧ ಇಲಾಖೆ ವತಿಯಿಂದ ಈ ಹಿಂದೆ ಅನುಚಿತ ವರ್ತನೆ ಆಧಾರದ ಮೇಲೆ ಕ್ರಮಕೈಗೊಳ್ಳಲಾಗಿದೆ. ಸದ್ಯ ಪೇದೆ ಮಾನಸಿಕವಾಗಿ ನೊಂದಿರುವಂತಿದೆ. ಇದರಿಂದ ಆತನನ್ನು ಹೊರ ತರುವ ಕೆಲಸ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಳೆದ ನ.20ರಂದು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾತ್ರಾಮಹೋತ್ಸವದ ಬಂದೋಬಸ್ತ್ ವಿಚಾರದಲ್ಲಿ ಕರ್ತವ್ಯ ಲೋಪ ಎಸಗಿದ್ದ ಹಿನ್ನೆಲೆಯಲ್ಲಿ ಪೇದೆಯೊಬ್ಬರಿಗೆ ಹಲ್ಲೆ ಮಾಡಿದ್ದಾರೆನ್ನಲಾಗುತ್ತಿರುವ ಪಿಎಸ್ಸೈ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಪೇದೆಯ ಪತ್ನಿ ಹಾಗೂ ತಾಯಿ ಶನಿವಾರ ಎಸ್ಪಿ ಕಚೇರಿ ಎದುರು ಧರಣಿ ನಡೆಸಿದ್ದರೆ, ತರೀಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಪೇದೆ ಅನ್ನಾಹಾರ ತ್ಯಜಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆಂದು ತಿಳಿದು ಬಂದಿದೆ.
ಶನಿವಾರ ಎಸ್ಪಿ ಕಚೇರಿಗೆ ಆಗಮಿಸಿದ್ದ ಪೇದೆ ಪತ್ನಿ ಆಶಾ ಹಾಗೂ ತಾಯಿ ಎಸ್ಪಿಹರೀಶ್ ಪಾಂಡೆ ಅವರಿಗೆ ದೂರಿನ ಪ್ರತಿ ನೀಡಿ ಪಿಎಸ್ಸೈ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ, ಎಸ್ಪಿಕಚೇರಿ ಎದುರು ಧರಣಿ ನಡೆಸಲು ಮುಂದಾದರು.
ಈ ವೇಳೆ ಎಸ್ಪಿ ಹರೀಶ್ ಪಾಂಡೆ, ಘಟನೆ ಸಂಬಂಧ ಆಂತರಿಕ ತನಿಖೆ ಕೈಗೊಂಡು ವಾಸ್ತವ ಅರಿತು ಕ್ರಮವಹಿಸುವುದಾಗಿ ತಿಳಿಸಿ, ಪೇದೆಯ ಪತ್ನಿಗೆ ಧರಣಿ ನಡೆಸದಂತೆ ಮನವಿ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ನಂತರ ಪೇದೆ ಪತ್ನಿ ಆಶಾ ಹಾಗೂ ತಾಯಿ ಎಸ್ಪಿಕಚೇರಿ ಆವರಣದ ಹೊರಗೆ ಕುಳಿತು ಧರಣಿ ಮುಂದುವರಿಸಿದರು.







