ಪುತ್ತೂರು: ಬಾಣಂತಿ ಆತ್ಮಹತ್ಯೆ
ಪುತ್ತೂರು, ನ. 24: ಹೆರಿಗೆಯಾಗಿ ತವರು ಮನೆಯಲ್ಲಿದ್ದ ಎರಡೂವರೆ ತಿಂಗಳ ಹಸುಗೂಸಿನ ತಾಯಿಯೊಬ್ಬರು ಮನೆಯ ಕೊಠಡಿಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಮಲಾರ್ ಎಂಬಲ್ಲಿ ಶನಿವಾರ ನಡೆದಿದೆ.
ಕುರಿಯ ಗ್ರಾಮದ ಮಲಾರ್ ನಿವಾಸಿ ದಿ. ಕೇಶವ ಆಚಾರ್ಯ ಅವರ ಪುತ್ರಿ ವೀಣಾ (36) ಆತ್ಮಹತ್ಯೆ ಮಾಡಿಕೊಂಡವರು.
ವೀಣಾ ಅವರನ್ನು 2 ವರ್ಷದ ಹಿಂದೆ ಬಂಟ್ವಾಳ ತಾಲ್ಲೂಕಿನ ವಾಮದಪದವು ನಿವಾಸಿ ಉಮೇಶ ಆಚಾರ್ಯ ಅವರಿಗೆ ವಿವಾಹ ಮಾಡಿ ಕೊಡಲಾಗಿತ್ತು. ಗರ್ಭಿಣಿಯಾಗಿದ್ದ ವೀಣಾ 5 ತಿಂಗಳ ಹಿಂದೆ ಹೆರಿಗೆಗಾಗಿ ಕುರಿಯದ ಮಲಾರ್ ನಲ್ಲಿರುವ ತಾಯಿ ಮನೆಗೆ ಬಂದಿದ್ದು, ಎರಡೂವರೆ ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯಾದ ಬಳಿಕ ಅವರು ತಾಯಿ ಮನೆಯಲ್ಲೇ ಬಾಣಂತನದ ಆರೈಕೆಯಲ್ಲಿದ್ದರು. ಎರಡು ದಿನಗಳ ಹಿಂದೆಯಷ್ಟೇ ಮಗುವಿಗೆ ನಾಮಕರಣ ಕಾರ್ಯಕ್ರಮವೂ ನಡೆದಿತ್ತು. ಶನಿವಾರ ಬೆಳಗ್ಗೆ ವೀಣಾ ಮಲಗಿದ್ದ ಕೋಣೆಯಲ್ಲಿ ಮಗು ಜೋರಾಗಿ ಅಳುತ್ತಿರುವುದನ್ನು ಕೇಳಿ ಮನೆಯವರು ಹೋಗಿ ನೋಡಿದಾಗ ವೀಣಾ ಕೋಣೆಯೊಳಗಿನ ಅಡ್ಡಕ್ಕೆ ಚೂಡಿದಾರದ ಶಾಲು ಬಳಸಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು.
ಮೃತರ ಸಹೋದರ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ವೀಣಾ ಅವರು ಪತಿ, ಒಂದೂವರೆ ತಿಂಗಳ ಪ್ರಾಯದ ಪುತ್ರಿ, ತಾಯಿ, 6 ಮಂದಿ ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ತಹಶೀಲ್ದಾರ್ ಅನಂತಶಂಕರ್ ಸಮ್ಮುಖದಲ್ಲಿ ಸಂಪ್ಯ ಠಾಣೆಯ ಎಸ್‍ಐ ಸತ್ತಿವೇಲು ಅವರು ಮೃತ ದೇಹದ ಪರಿಶೀಲನೆ ನಡೆಸಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.