ನಾಲ್ಕನೇ ಬಾರಿ ಟ್ವೆಂಟಿ-20 ವಿಶ್ವಕಪ್ ಕಿರೀಟ ಧರಿಸಿದ ಆಸ್ಟ್ರೇಲಿಯದ ವನಿತೆಯರು

ಆ್ಯಂಟಿಗುವಾ, ನ.25: ಆಸ್ಟ್ರೇಲಿಯ ವನಿತೆಯರ ಕ್ರಿಕೆಟ್ ತಂಡ ನಾಲ್ಕನೇ ಬಾರಿ ಟ್ವೆಂಟಿ -20 ವಿಶ್ವಕಪ್‌ನ್ನು ಜಯಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ ಆಸ್ಟ್ರೇಲಿಯ ಪ್ರಶ್ತಿಯನ್ನು ಬಾಚಿಕೊಂಡಿದೆ.
ಗೆಲುವಿಗೆ 106 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ 15.1 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಗಳಿಸಿ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್‌ಗೆ ಮೂರನೇ ಬಾರಿ ವಿಶ್ವಕಪ್‌ನ್ನು ನಿರಾಕರಿಸಿದೆ.
ಇಂಗ್ಲೆಂಡ್ 2009ರಲ್ಲಿ ಒಂದು ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು. ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಪ್ರಯತ್ನದಲ್ಲಿ ಎಡವಿದೆ.ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ 19.4 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲೌಟಾಗಿತ್ತು. ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ 43 ರನ್ ಮತ್ತು ನಾಯಕಿ ಹೇದರ್ ನೈಟ್ 25ರನ್ ಗಳಿಸಿದರು.
ಆಸ್ಟ್ರೇಲಿಯದ ನಾಯಕಿ ಮೆಗ್ ಲ್ಯಾನಿಂಗ್ ಔಟಾಗದೆ 28ರನ್, ಗಾರ್ಡೆನೆರ್ ಔಟಾಗದೆ 33ರನ್, ವಿಕೆಟ್ ಕೀಪರ್ ಹಿಲೈ 22 ರನ್ ಮತ್ತು ಮೂನಿ 14 ರನ್ ಗಳಿಸಿದರು.
ಇಂಗ್ಲೆಂಡ್ ತಂಡ ಭಾರತವನ್ನು ಮಣಿಸಿ ಹಾಗೂ ಆಸ್ಟ್ರೇಲಿಯ ಹಾಲಿ ಚಾಂಪಿಯನ್ ವೆಸ್ಟ್‌ಇಂಡೀಸ್‌ನ್ನು ಸೆಮಿಫೈನಲ್‌ನಲ್ಲಿ ಬಗ್ಗು ಬಡಿದು ಫೈನಲ್ ತಲುಪಿತ್ತು.







