ಅನಾಥಾಶ್ರಮ ಮಕ್ಕಳ ಕ್ರೀಡೆ-ಸಾಂಸ್ಕೃತಿಕ ಸ್ಪರ್ಧಾಕೂಟಕ್ಕೆ ಚಾಲನೆ

ಮಂಗಳೂರು, ನ.25: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ರೋಟರಿ 20ನೇ ವಾರ್ಷಿಕ ಅಂತರ್ ಅನಾಥಾಶ್ರಮ ಮಕ್ಕಳ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕೂಟ ಹಾಗೂ ಉತ್ಸವವು ರವಿವಾರ ನಗರದ ಕೆನರಾ ಹೈಸ್ಕೂಲ್ ಉರ್ವ ಪ್ರಾಂಗಣದಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರದ ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಭಾಸ್ಕರ್ ಶೆಟ್ಟಿ ಮಾತನಾಡಿ, ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡುವ ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವ ಶ್ಲಾಘನೀಯ ಎಂದರಲ್ಲದೆ, ಸಮಾಜದಲ್ಲಿರುವ ಅನಾಥ ಮಕ್ಕಳ ಅಸಮಾನತೆ ಮತ್ತು ಅನಾಥ ಪ್ರಜ್ಞೆಯನ್ನು ನಿರ್ಮೂಲನೆಗೊಳಿಸಿ ಅವರ ಕ್ಷೇಮಾಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಡಾ.ದೇವದಾಸ್ ರೈ, ರೋಟರಿ ವಲಯ 2 ಸಹಾಯಕ ಗವರ್ನರ್ ಕಿರಣ್ ಪ್ರಸಾದ್ ರೈ, ರೋಟರಿ ಸಂಸ್ಥೆಯ ಸ್ಥಾಪನಾಧ್ಯಕ್ಷ ಪ್ರೇಮನಾಥ್ ಕುಡ್ವ, ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ಸಲ್ದಾನ ಕ್ರಾಸ್ತ ಉಪಸ್ಥಿತರಿದ್ದರು.
ಚುನಾಯಿತ ಗವರ್ನರ್ ರಂಗನಾಥ್ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಸಂಸ್ಥೆಯ ಅಧ್ಯಕ್ಷ ರೋ. ಸಂತೋಷ್ ಶೇಟ್ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಜೋಯಲ್ ಲೋಬೋ ವಂದಿಸಿದರು.
ಡಾ. ಕೆ.ಎಂ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
*ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಗರ ಮತ್ತು ಆಸುಪಾಸಿನ 10 ಅನಾಥಾಶ್ರಮದ ಸುಮಾರು 600 ಮಕ್ಕಳಲ್ಲಿ ಅತ್ಯಂತ ಸಂತಸ, ಸಂಭ್ರಮದ ವಾತಾವರಣ ಕಂಡುಬಂತು. ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತರಾದ ಮುಗ್ಧ ಮಕ್ಕಳು ಇತರ ಆಶ್ರಮದ ಮಕ್ಕಳ ಜೊತೆಗೆ ಬೆರೆತು ಉತ್ಸಾಹದಿಂದ ಕುಣಿದಾಡಿದರು. ವರ್ಣರಂಜಿತ ಪಥ ಸಂಚಲನ ನೀಡಿದ ಬಳಿಕ ಸ್ಫೂರ್ತಿ ಮತ್ತು ಉತ್ಸಾಹದಿಂದ ತಮ್ಮಲ್ಲಿ ಹುದುಗಿದ ಕ್ರೀಡಾ ಸಾಮರ್ಥ್ಯ ಮತ್ತು ಕಲಾಪ್ರತಿಭೆಯನ್ನು ಪ್ರದರ್ಶಿಸಿ ಸಭಿಕರನ್ನು ಅಚ್ಚರಿಗೆ ಕೆಡವಿದರು.







