ಚುನಾವಣೆಗಳಿಗೆ ಮುನ್ನ ‘ರಾಮ್ ರಾಮ್’, ನಂತರ ‘ಆರಾಮ್’: ಬಿಜೆಪಿಗೆ ಉದ್ಧವ್ ಚಾಟಿ
“ಹಿಂದೂಗಳ ಭಾವನೆಗಳೊಂದಿಗೆ ಆಟವಾಡಬೇಡಿ”
ಅಯೋಧ್ಯೆ, ನ.25: ಬಿಜೆಪಿಯು ಚುನಾವಣೆಗಳಿಗೆ ಮುನ್ನ ರಾಮ್ ರಾಮ್ ಎಂದು ಜಪಿಸುತ್ತಾ ಚುನಾವಣೆಯ ನಂತರ ‘ಆರಾಮ್’ ಮಾಡುತ್ತಿದೆ ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಅಯೋಧ್ಯೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. “ಹಿಂದೂಗಳ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ಬಿಜೆಪಿಗರಿಗೆ ತಿಳಿಸಲು ನಾನಿಲ್ಲಿಗೆ ಬಂದಿದ್ದೇನೆ” ಎಂದವರು ಹೇಳಿದರು.
“ಹಿಂದೂಗಳು ಬಲಿಷ್ಟರಾಗಿ ಬೆಳೆದಿದ್ದಾರೆ. ಇನ್ನು ಮುಂದೆ ಹೊಡೆತ ತಿನ್ನುವುದಿಲ್ಲ. ರಾಮ ಮಂದಿರ ನಿರ್ಮಾಣವಾಗದಿದ್ದರೆ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೇರುವುದಿಲ್ಲ. ಆದರೆ ರಾಮ ಮಂದಿರ ನಿರ್ಮಾಣವಾಗಲಿದೆ. ನನ್ನ ಅಯೋಧ್ಯೆ ಭೇಟಿಯ ಹಿಂದೆ ಯಾವುದೇ ಹಿಡನ್ ಅಜೆಂಡಾ ಇಲ್ಲ. ನಾನಿಲ್ಲಿಗೆ ಜನರ ಪರವಾಗಿ ಬಂದಿದ್ದೇನೆಯೇ ಹೊರತು ದ್ವೇಷವನ್ನು ಹರಡಲು ಅಲ್ಲ. ನಾವೆಲ್ಲರೂ ರಾಮ ಮಂದಿರಕ್ಕಾಗಿ ಕಾಯುತ್ತಿದ್ದೇವೆ. ಕುಂಭಕರ್ಣ (ಬಿಜೆಪಿ ಸರಕಾರ)ನನ್ನು ಎಚ್ಚರಿಸಲು ನಾನಿಲ್ಲಿಗೆ ಬಂದಿದ್ದೇನೆ” ಎಂದವರು ಹೇಳಿದರು.